Custom Search

Tuesday, September 29, 2009

ನನ್ನವಳು...

ಗುಂಡ, ಒಬ್ಬ ಸೋಮಾರಿ, ಸಮಯ ಸ್ವಾಹ ಮಾಡುವವನು. ಗುಂಡನ ಲೋಕದಲ್ಲಿ, ಗುಂಡನಿಗೆ ಅವನದೇ ಆದ ಕೆಲವು ಆಟ-ಪಾಠಗಳು, ಕನಸಿನ ಲೋಕಗಳು, ಅನುಭವಗಳು, ಕನಸುಗಳು. ಅವನ ಲೋಕದಲ್ಲಿ ಅವನು ಬಿಟ್ಟು ಮತ್ಯಾರು ಇಲ್ಲ. ಅವನಿಗೆ ಯಾಕೋ-ಏನೋ ಅವನ ಲೋಕದ ಬಗ್ಗೆ ನಿಮಗೆಲ್ಲ ತಿಳಿಸಬೇಕು ಅಂತ ಆಸೆ ಆಗಿದೆಯಂತೆ, ಸಣ್ಣ ಕಥೆ ಥರ ಹೇಳ್ತೀನಿ ಅಂತಿದ್ದಾನೆ, ಈ ಕಥೆಗಳನ್ನು ಅವನ ಮಾತಿನಲ್ಲೇ ಕೇಳಿಸಲು, ನಾನೊಂದು "ಮಾಧ್ಯಮ".

೧ .
ಅಂದೊಂದು ದಿನ ೨೬ನೇ ಸೆಪ್ಟೆಂಬರ್ ೨೦೦೩ ಶುಕ್ರವಾರ, ನನಗೆ ಪರಿಚಯದ ಒಬ್ರಿಗೆ ಹುಷಾರು ತಪ್ಪಿತ್ತು, ಅವ್ರು ಆಸ್ಪತ್ರೆಯಲ್ಲಿದ್ರು, ಅವ್ರನ್ನ ನೋಡಿ, ಮಾತಾಡ್ಸ್ಕೊಂಡು ಬರೋಣ ಅಂತ ನಾನು ಆಸ್ಪತ್ರೆಗೆ ಹೋಗಿದ್ದೆ. ಆ ರಿಸೆಪ್ಶನಿಸ್ಟ್, ಸೆಕ್ಯೂರಿಟಿ, ಅವ್ರು ಇವ್ರನ್ನ ನೋಡ್ಕೊಂಡು, ಹಾಗೆ ಕ್ಷೇಮ ( :) ) ಸಮಾಚಾರ ವಿಚಾರಿಸ್ತಾ, ನಮ್ ಪರಿಚಯದವರ ಬೆಡ್ ಹತ್ರ ಹೋದೆ. ಡಾಕ್ಟ್ರು ಮತ್ತೆ ನರ್ಸ್ ಒಳ್ಳೆ ಹಾರೈಕೆ ಮಾಡ್ತಿದ್ರು, ಹಾಗಾಗಿ ಅವ್ರು ಎಲ್ಲದಕ್ಕಿಂತ ಸ್ವಲ್ಪ ಬೇಗ ಹುಷಾರಾಗ್ತಿದ್ರು. ಸರಿ, ಅವರ ಜೊತೆ ಒಂದ್ ಹತ್-ನಿಮ್ಷ ಮಾತಾಡಿದ್ಮೇಲೆ, ಮನೆ ದಾರಿ ಹಿಡ್ಯೋಣ ಅಂತ, ಅವ್ರಿಗೆ ವಿದಾಯ ಹೇಳಿ, ಆರೋಗ್ಯದ ಕಡೆ ಗಮನ ಇರಲಿ ಅನ್ನೋ ಕಿವಿಮಾತು ಕಿವಿಗೆ ಹಾಕಿ, ಕೂತಿದ್ದ ಜಾಗದಿಂದ ಎದ್ದು ಹೊರಟೆ.

ಅವರ ಬೆಡ್ ಇಂದ ಹೊರಗೆ ಬರೋ ದಾರಿಲಿ (ಒಳಗೆ ಹೋಗ್ಬೇಕಾದ್ರು ಅದೇ ದಾರಿನೇ :) ), ಎಡ-ಬಲ ಎರಡೂ ಕಡೆಗಳಲ್ಲಿ, ಒಬ್ರು-ಇಬ್ರು ರೋಗಿಗಳು ಇರಬಹುದಾದ ರೂಂಗಳ ಸಾಲು. ನಡಿಬೇಕಾದ್ರೆ ಸುಮ್ನೆ ನಡ್ಯೋಕೆ ಆಗುತ್ತಾ, ತಲೆ-ಕಣ್ಣು ನಿಲ್ಬೇಕಲ್ವ? ಹಾಗೆ ಅಲ್ಲಿ-ಇಲ್ಲಿ ಕಣ್ಣು ಹಾಯಿಸ್ತಾ ನಡಿತಿದ್ದೆ. ನಡಿಗೆಯ ಸ್ಪೀಡು ಗಡಿಯಾರದ ಘಂಟೆ ಮುಳ್ಳಿನ ಸ್ಪೀಡು ಎರಡು ಒಂದೇ ಆಗಿತ್ತು, ಆದ್ರೆ ಕಣ್ಣು ಅದೇ ಗಡಿಯಾರದ ಸೆಕೆಂಡ್ ಮುಳ್ಳಿಗಿಂತ ಜಾಸ್ತಿ ಸ್ಪೀಡಾಗಿ ಓಡ್ತಿತ್ತು. ನಡಿಗೆಯ ಗತಿ (ಸ್ಪೀಡು), ಒಂದೇ ಕ್ಷಣದಲ್ಲಿ ಚೇಂಜ್ ಆಗೋಯ್ತು, ಕಾಲ್ಗಳು ಸುಮಾರು ೨ ಹೆಜ್ಜೆ ಹಿಂದೆ ಹೋದ್ವು, ತಲೆ ಎಡಕ್ಕೆ ತಿರುಗ್ತಿದ್ದಂಗೆ ಕಣ್ಣು ಏನನ್ನೋ ಹುಡ್ಕೋಕೆ ಶುರು ಮಾಡ್ಕೊಂದ್ಬಿಡ್ತು. ಹತ್ತು ಸೆಕೆಂಡ್ ನ ತುಡಿತ, ಹತ್ತು ವರ್ಷಗಳಷ್ಟು ಕಾಯ್ಕೊಂಡು ಕೂತಿದ್ನೇನೋ ಅಂತ ಅನಿಸ್ಬಿಡ್ತು. ಯಾಕಂದ್ರೆ ಅಲ್ಲಿ, ಆ ಹತ್ತು ಸೆಕೆಂಡ್ಗಳ ಅಂತರದಲ್ಲಿ, ನನ್ನ ೧೬ ವರ್ಷಗಳ ಜೀವಮಾನದಲ್ಲಿ ಕಾಣದ ರೂಪರಾಶಿ, ಸ್ವಪ್ನ ಸುಂದರಿಯ (Dream Girl) ಕಂಡೆ.

ಕಾಲುಗಳು ಆಪೋಸಿಟ್ ಡೈರೆಕ್ಷನ್ ಅಲ್ಲಿ ಹೋಗಿ, ತಲೆ ಎಡಕ್ಕೆ ತಿರುಗಿ, ಕಣ್ಣು ಹುಡುಕಾಟ ಶುರುಮಾಡ್ದಾಗ ಮೊದಲು ಕಂಡದ್ದು ಅವಳ ಬೆಳ್ಳಿ ಸೀರೆಯ ಸೆರಗಿನ ಹಾರಾಟ. ಅದರ ಹಾರಾಟದ ಜೊತೆ-ಜೊತೆಯಲಿ, ಕಣ್ಣಿಂದ ಏನೋ ಒಂದು ಮಿಂಚು, ನೆತ್ತಿಗೆ ಏರಿ, ನೆತ್ತಿಯಿಂದ ನೇರವಾಗಿ ಹೃದಯಕ್ಕೆ ಬಂತು, ಅಷ್ಟರಲ್ಲಿ ನಾನು ನನ್ ಕಣ್ಣು ಮುಚ್ಚಿದ್ದೆ. ಮುಂದೆ ಕಂಡದ್ದೆಲ್ಲಾ ಸುಂದರ-ಸುಮಧುರ ಸ್ವಪ್ನ (ಕನಸು). ಅವಳ ನೋಟ ಕಂಡ ಕ್ಷಣದಲ್ಲೇ ನಾನು ಕಣ್ಣು ಮುಚ್ಚಿದ್ದೆ, ತಿಳಿ ಹಾಲ ನಿಂತ ನೆಲೆಯ ಮಧ್ಯೆ ಹೊಳೆವ ಕಪ್ಪು ಹಣತೆಯ ಬೆಳಕಿನಂತೆ ಅವಳ ಕಣ್ಣು ಬೆಳಗುತ್ತಿತ್ತು, ನೋಟ ಹೊಳೆಯುತ್ತಿತ್ತು. ಆ ನೋಟದ ಕಾಂತಿ ನನ್ ಕಣ್ಣು ಮಂಜಾಗಿಸಿತ್ತು, ಮನಸ ನಂಜಾಗಿಸಿತ್ತು. ಹಿಡಿದು ಬಗ್ಗಿಸಿದ ಕಾಮನಬಿಲ್ಲಿನ ಹುಬ್ಬು, ಅಗಾಗ ಬಾಗುತಿತ್ತು, ತಂಪು ತಂಗಾಳಿಗೆ ತೇಲಿಬರುವ ತೆಳು ಅಲೆಯಂತೆ ಕೆನ್ನೆಯ ಗುಳಿ. .......... ಇದೆಲ್ಲದರ ಜೊತೆ, ಬಿಲ್ಲಿನ ಹುಬ್ಬುಗಳ ಮಧ್ಯೆ ಮಿನುಗುತ್ತಿದ್ದ ಕೆಂಪು ಕುಂಕುಮ, ಅಂದವನ್ನು ಇನ್ನೊ ಹೆಚ್ಚಿಸಿತ್ತು. ನಾನು ಕಣ್ಮುಚ್ಚಿದಾಗ, ಬೆಳ್ಳಿಮೋಡದ ಬೆಳ್ಳಿ ಅಂಚಿನ ಹಾಲ ಹಾದಿಯಲಿ, ಸುಡುವ ತಂಗಾಳಿಗೆ ಮೈಯೊಡ್ಡಿ, ಪಂಜರದಿಂದ ಪಾರಾದ ಪುಟ್ಟ ಹಕ್ಕಿಯಂತೆ ಹಾರುತ್ತಿದ್ದ, ತೇಲುತ್ತಿದ್ದ ಶುದ್ಧ ಬಿಳಿಯ ಬಟ್ಟೆ ತೊಟ್ಟ ಸುಂದರಿ ಮೊದಲು ಕಂಡಳು. ಮಯೂರಿಯ ನಾಟ್ಯ ನಡಿಗೆಯ ಹಿಂಬಾಲಿಸಿ ಹೊರಟಿದ್ದ ನಾನು, ಅವಳ ಮುಖಕಮಲದ ದರ್ಶನಕ್ಕಾಗಿ ಕಾದಿದ್ದೆ. ಹಿಂದೆ ಹೊರಟಿದ್ದ ನಾನು, ಸಪ್ತ ಸಾಗರ ದಾಟಿದ್ದೆ, ಸುಂದರ ಬನಗಳಲ್ಲಿ ನುಗ್ಗಿದ್ದೆ, ಭವ್ಯ ಭಾರತದ ಶಿರೋಮಣಿ ಹಿಮಾಲಯ ಶಿಖರ ಏರಿದ್ದೆ. ಬಿದಿಗೆ ಚಂದ್ರನ ಬದಿಯಲ್ಲಿ ನಿಂತು ಕಮಲವದನೆಯ ಕಮಲವದನವ ನೋಡುವ ಕಾತರದಲ್ಲಿದ್ದೆ, ಅಬ್ಬಾ ಕೊನೆಗೂ ಕಂಡೆನಾನವಳವದನ. ಲೇ ಗುಂಡ, ಕಣ್ ಬಿಡೋಲೆ!!! ಎಲ್ಲಿದ್ದೀಯ? ನನ್ ಪರಿಚಯದವರ ದನಿ ನನ್ ಕಿವಿಗೆ ಬಿತ್ತು, ಕಣ್ಣು ಬಿಟ್ಟೆ.