Custom Search
Showing posts with label ಕನಸು. Show all posts
Showing posts with label ಕನಸು. Show all posts

Wednesday, September 26, 2012

ಒಂದು ಸುಂದರ ಕನಸು....


ತುಂಬ ಬ್ಯುಸಿ ಲೈಫ್, ಕೈ ತುಂಬಾ ಕೆಲ್ಸ. ತಲೆ ತುಂಬ ಯೋಚನೆಗಳು, ಅದಕ್ಕೆ ತಕ್ಕಂತೆ ಯೋಜನೆಗಳು. ಇದು ನನ್ನ ಸಾಮಾನ್ಯ ದಿನಚರಿ. ಬಹಳ ದಿನ ಆದ್ಮೇಲೆ ಈ ಜೀವನಕ್ಕೆ ಮತ್ತೆ ವಾಪಾಸ್. ಹಾಗಾಗಿ, ನನ್ನ ಪೂರ್ತಿ ಏಕಾಗ್ರತೆ ಕೆಲಸದ ಕಡೆ, ಹೀಗೆ ಕೆಲ್ಸ ಮಾಡ್ತಿರ್ಬೇಕಿದ್ರೆ ಟೈಮು ರಾತ್ರಿ 12.30 ಆಗಿದ್ದು ಗೊತ್ತೇ ಆಗ್ಲಿಲ್ಲ. ಆ ಟೈಮು ಆಗ್ತಿದ್ದಂಗೆ ಕಣ್ಣು ಯಾಕೋ ಎಳೀತಿತ್ತು ಹಾಸಿಗೆ ಕಡೆಗೆ. ಸುಮಾರು 12.35 - 12.37 ಹೊತ್ತಿಗೆ, ಕಂಪ್ಯೂಟರ್ ಆಫ್ ಮಾಡಿ ಮಲ್ಕೊಂಡೆ.

ಮಲಗಿದ ಕೆಲವೇ ಕ್ಷಣದಲ್ಲಿ ನಿದ್ದೆ ಬಂದ್ಬಿಡ್ತು. ಅದು ಯಾವಾಗಲು ಹಂಗೆ, "ಚಿಂತೆ ಇಲ್ಲದವನಿಗೆ ಸಂತೆಯಲ್ಲೂ ನಿದ್ದೆ", ಅದೇ ರೀತಿ ಹಾಸಿಗೆ ಏರಿ, ಕಣ್ಣು ಮುಚ್ಚಿದ್ರೆ ನಿದ್ದೆ ಎಲ್ಲಿದ್ರೂ ಓಡಿ ಬರುತ್ತೆ. ನಿದ್ದೆಗೆ ಹೋದ್ಮೇಲೆ ಕನಸು ಬರ್ಬೇಕು ಅಲ್ವಾ...!!! ಬಂತು... ಭಯಾನಕ... :) ಕನಸು... ಬಂದೆ ಬಿಡ್ತು.

ಹೆಸರು ತಿಳಿಯದ ಊರು, ಸುತ್ತ-ಮುತ್ತ ಪರಿಚಯವಿಲ್ಲದ ಜನ, ಹಂಗೆ ತಿರುಗಾಡ್ತಿರ್ಬೇಕಿದ್ರೆ ಅಲ್ಲಿ ಎಲ್ಲೋ ದೂರದಲ್ಲಿ ಬೆಂಕಿ ಬಿದ್ದಿದೆ. ಅಲ್ಲಿಗೆ ಹೋಗೋ ಹೊತ್ಗೆ ಬೆಂಕಿ ಆರಿಹೋಗಿ, ಬೆಂಕಿಯಲ್ಲಿ ಅರ್ಧ ಬೆಂದ, ಸುಟ್ಟ ದೇಹಗಳು. ಅದನ್ನ ನೋಡೋಕೆ ಆಗದೆ ಕಣ್ಣು ಬಿಟ್ಟು, ಶಿವ ಶಿವ ಅಂತ ಒಂದೆರಡು ನಮಸ್ಕಾರ ಹೊಡೆದು ಮತ್ತೆ ಮಲ್ಕೊಂಡೆ. ಟೈಮು ಆಗ 2.15 ಆಗಿತ್ತು.

ಸುತ್ತಾ ಗೆಳೆಯರು, ಒಂದು ಸಣ್ಣ ಟ್ರಿಪ್ ಹೋಗಿ, ಮಜಾ-ಮಸ್ತಿ ಮಾಡಿ ಬಂದದ್ದಾಯಿತು. ಈಗ ಮತ್ತೇನು ಕೆಲ್ಸ ಅಂತ ಯೋಚಿಸ್ತಿರ್ಬೇಕಿದ್ರೆ, ಯಾಕೋ ಗೊತ್ತಿಲ್ಲ ಕಣ್ರೀ ಒಂದು ದೇವಸ್ಥಾನ ಬಾ ಅಂತ ಕರೆ ಕೊಡ್ತಾ ಇತ್ತು. ""ನಾನು ಇರೋದು ಬಸವನಗುಡಿ, ಗೌರಿ-ಗಣೇಶ ಹಬ್ಬದ ದಿನ ಗಣೇಶನಿಗೆ ನನ್ನ ಮೇಲೆ ಪ್ರೀತಿ ಜಾಸ್ತಿ ಆಗಿತ್ತು ಅನ್ಸುತ್ತೆ, ಮೂರು ಸಾರಿ ನನ್ನ ದೇವಸ್ಥಾನಕ್ಕೆ ಕರೆಸ್ಕೊಂಡ. ಆ ದಿನ ಮೂರು ಬಾರಿ ದೊಡ್ಡ ಗಣೇಶನ ದರ್ಶನ ಆಯ್ತು..."" ಬಹುಷಃ ಇದೇ ವಿಷ್ಯ ತಲೆಯ ಯಾವ್ದೋ ಮೂಲೇಲಿ ಇತ್ತು ಅನ್ಸುತ್ತೆ, ಒಂದು ದೇವಸ್ಥಾನದಿಂದ ಕರೆ ಬರ್ತಿತ್ತು. ಹೇಗೆ ಹೋದ್ರೆ ಎಲ್ಲಿ ಹೋಗ್ತೀನಿ ಏನು ಗೊತ್ತಿಲ್ಲ, ಯಾವ ದಾರೀಲಿ ಹೋಗ್ತಿದ್ದೀನಿ ಅಂತ ಗೊತ್ತಿಲ್ಲ. ಹೋಗ್ತಾ ಇದ್ರೆ ಎಂಥಾ ಖುಷಿ!!! ಎಡಗಡೆ ನೋಡ್ಬೇಕೋ, ಬಲಗಡೆ ನೋಡ್ಬೇಕೋ ಕನ್ಫ್ಯೂಷನ್. ಒಂದಕ್ಕಿಂತ ಒಂದು ಸುಂದರ. ಪ್ರಕೃತಿ ಅನ್ನೋ ಮಾಯೆ, ಪೂರ್ತಿ ಮೋಡಿ ಮಾಡ್ಬಿಟ್ಟಿದ್ಳು. ಅದೇ ಗುಂಗಲ್ಲಿ ಮುಂದೆ ಹೋಗ್ತಾ ಇದ್ದೆ, ಎದುರು ಒಂದು ಹಳೆಯ ದೇವಸ್ಥಾನ. ಹೊರಗಿಂದ ನೋಡಿದ್ರೆ ತುಂಬ ಹಳೆಯ ದೇವಸ್ಥಾನ ಅನಿಸ್ತಿತ್ತು. ಒಳಗೆ ಹೋದ್ರೆ, ನೆಲ ಎಲ್ಲ ಕಿತ್ತು ಕಾಂಕ್ರೀಟ್ ಹಾಕ್ತಿದ್ದಾರೆ. ಒಳಗೆ ಹೋಗಿ ಅಲ್ಲಿದ್ದ ಶಿವಲಿಂಗದ ದರ್ಶನ ಮಾಡಿ, ಕಣ್ಣು ಬಿಟ್ಟೆ. ಎದುರು ನನ್ನ ಗೆಳತಿ!!!! ಒಬ್ಬರನ್ನೋಬ್ರು ನೋಡಿದ್ಮೇಲೆ ಮುಖದ ಮೇಲೆ ಕಿರುನಗೆ. ಇಬ್ಬರು ದೇವರ ದರ್ಶನ ಮಾಡಿ ಆಯ್ತು. ಆಮೇಲೆ ಸಾಮಾನ್ಯವಾಗಿ ದೇವಸ್ಥಾನದಲ್ಲಿ ಸ್ವಲ್ಪ ಹೊತ್ತು ಕೂರ್ತೀವಿ ಅಲ್ವಾ... ಅದೇ ರೀತಿ ಕೂತ್ಕೊಂಡು ಮಾತಾಡೋಕೆ ಶುರು ಮಾಡಿದ್ವಿ....

ಏನು ಇವತ್ತು ನೀನು ದೇವಸ್ಥಾನಕ್ಕೆ ಬಂದಿದ್ದೀಯ???

ಇವತ್ತು ಏನು ಸ್ಪೆಷಲ್ ಅಂತ ಗೊತ್ತಿಲ್ವಾ ನಿಂಗೆ...???

ಇಲ್ಲ ಕಣೆ!!! ಈ ದಿನ ಯಾವ ಹಬ್ಬನು ಇಲ್ಲಾ, ಏನು ವಿಶೇಷ ಅಂತ ಗೊತಾಗ್ತಾ ಇಲ್ಲಾ ನೀನೆ ಹೇಳೆ... :)

ಸ್ವಲ್ಪ ಹೊತ್ತು ಕಾದು ನೋಡು ಗೊತ್ತಾಗುತ್ತೆ (ಒಂದು ತುಂಟ ನಗೆ)...

ತುಂಬ ಚೆನ್ನಾಗಿ ಕಾಣಿಸ್ತಿದ್ದೀಯಾ ಕಣೆ... ಆದ್ರೆ ಏನು ಸ್ಪೆಷಲ್ ಅಂತ ಇನ್ನು ನನ್ನ ತಲೆಗೆ ಹೊಳೀತಿಲ್ಲ...
(ಮತ್ತೆ ಅದೇ ತುಂಟ ನಗೆ)

ನೋಡ್ತಾ ಇರು ಹೀಗೆ ನನ್ನ .... ಇನ್ನು ಸ್ವಲ್ಪ ಹೊತ್ತಲ್ಲೇ ಗೊತ್ತಾಗುತ್ತೆ... :)

ಈಗ ಬೇರೆ ಇನ್ನೇನು ಕೆಲ್ಸ ಇದೆ ಹೇಳು, ಅದೇ ಮಾಡ್ತೀನಿ ಚಿನ್ನು....

ಸರಿ ಬಾ ಹೋಗೋಣ, ದೇವಸ್ಥಾನ ಪ್ರದಕ್ಷಿಣೆ ಹಾಕ್ಬೇಕು... ನಾ ಮುಂದೆ ಹೋಗ್ತೀನಿ, ನೀ ಹಿಂದೆ ಬಾ...

ಸರಿ ಕಣೆ.. ನಡೆ ಮುಂದೆ.. ನಾ ನಿನ್ನ ಹಿಂದೆ... :) 

ಅವಳು ಮುಂದೆ ಹೋಗ್ತಿದ್ದಾಳೆ, ನಾನು ಅವಳ ಹಿಂದೆ ಹೋಗ್ತಿದ್ದೇನೆ... ಏನೋ ಸ್ಪೆಷಲ್ ಅನಿಸ್ತಿದೆ.!!! ಏನು ಏನು ಏನು... :) ಒಹ್...!!! ನನ್ನ ಇಷ್ಟದ ಲಂಗದಾವಣಿ ಹಾಕಿದ್ದಾಳೆ.... :) ಓಡಿ ಹೋಗಿ.. ಎದುರು ನಿಂತು...

ಹೇಳು...

ಏನ್ ಹೇಳ್ಬೇಕು???

ಏನು ಹೇಳ್ಬೇಕು ಅಂತ ನಿನ್ನ ಮನಸಲ್ಲಿದೆಯೋ ಅದು...

ಏನು ಇಲ್ಲಾ... :) (ಮತ್ತದೇ ತುಂಟ ನಗೆ)

ಏನು ಹೇಳೋದಿಲ್ವಾ??? ಸರಿ.. ಹಾಗಿದ್ರೆ ಈ ಬಟ್ಟೆ ಯಾಕೆ???
(ಅಲ್ಲೇ ಒಂದೆರಡು ಪುಟ್ಟ ಹೆಣ್ಣು ಮಕ್ಕಳು ಆಟ ಆಡ್ತಿದ್ವು, ಆ ಮಕ್ಕಳು ಕೂಡ ಲಂಗ-ದಾವಣಿ ಹಾಕಿದ್ರು)

ಅಲ್ಲಿ ನೋಡು... ಆ ಮಕ್ಳು ಕೂಡ ಇದೆ ರೀತಿ ಬಟ್ಟೆ ಹಾಕಿದ್ದಾರೆ.. ಅದರಲ್ಲಿ ಏನು ಸ್ಪೆಷಲ್???

ಹೇಳೆ....

ಮೊದ್ಲು ಪ್ರದಕ್ಷಿಣೆ ಹಾಕು.... ನನ್ನ ಹಿಂದೆ ಬಾ.... :)

ಮೂರು ಪ್ರದಕ್ಷಿಣೆ ಹಾಕಿದ್ದು ಆಯ್ತು. ಮತ್ತೆ ಅವ್ಳು ಮುಂದೆ ಹೋಗಿದ್ದಾಳೆ ನಾನು ಅವಳ ಹಿಂದೆ ಹೋಗ್ತಿದ್ದೇನೆ. ಯಾಕೋ ಗೊತ್ತಿಲ್ಲ ಕಣ್ರೀ, ಮತ್ತೆ ಅವಳು ಏನೋ ಹೇಳಬೇಕಿದೆ ಅಂತ ಅನಿಸ್ತು... ಮತ್ತೆ ಓಡಿ ಹೋಗಿ.. ಅವಳ ಎದುರು ನಿಂತು...

ಹೇಳ್ತೀಯಾ? ಇಲ್ವಾ??? :)

ಏನು ಇಲ್ಲಾ ಕಣೋ.. ಹೇಳ್ದೆ ಅಲ್ವಾ.... ಸುಮ್ನೆ ನನ್ ಹಿಂದೆ ಬಾ... :) 

ಆಗೋದಿಲ್ಲ.. ನಾ ಮುಂದೆ ಹೋಗ್ತೀನಿ... ನೀನೆ ಹಿಂದೆ ಬಾ... 

ಸರಿ... :) (ಮೆಲುದನಿಯಲ್ಲಿ : ಇನ್ಮುಂದೆ ಅದು ಇದ್ದಿದ್ದೆ ಅಲ್ವಾ... :) )

ಇನ್ನೊಂದ್ಸಲ ಹೇಳು....

ಏನು ಇಲ್ಲಾ... :)
(ನೋಡೋಕೆ ಕಡ್ಡಿ ರೀತಿ ಇದ್ರೂ, ತಿಂಡಿಪೋತಿ :) )

ಸೌತೆಕಾಯಿ ಕೊಡ್ಸೋ ನಂಗೆ....

ಸರಿ ಬಾ... 
(ಕೊಡ್ಸಿದ್ದು ಆಯ್ತು, ಇದೆ ತರ ಸೌತೆಕಾಯಿ ಮತ್ತೆ ಹಣ್ಣು ತಿಂತಿದ್ರೆ ದಪ್ಪ ಯಾವ ಕಡೆಯಿಂದ ಆಗೋದು... )
ಮುಂದೆ ಹೋಗ್ತಾ ಇದ್ದೇನೆ... ಹಿಂದೆ ಬರ್ತಾ ಇದ್ದಾಳೆ.. ಪಾಪಿ.. ತಿನ್ನು ಅಂತ ಆಫರ್ ಕೂಡ ಮಾಡ್ಲಿಲ್ಲ. ಹಾಗೆ ಅವ್ಳು, ಅವ್ಳು ತಿಂದಿದ್ದು ನಂಗೆ ಕೊಡ್ತಿರ್ಲಿಲ್ಲ, ನಾ ತಿಂದದ್ದು ತಗೊತಿರ್ಲಿಲ್ಲ.

ಉಪ್ಪು ಬೇಕಾ ಉಪ್ಪು....???? 

ಬೇಡ ಹೋಗೆ.... ಉಪ್ಪು ಬೇಡ, ಸೌತೆಕಾಯಿ ಕೂಡ ಬೇಡ.. ಎಲ್ಲ ನೀನೆ ತಿನ್ನು...

ನಾವು ಮಕ್ಕಳಿದ್ದಾಗ ಉಪ್ಪುಮೂಟೆ ಆಟ ಆಡಿದ ಜ್ಞಾಪಕ ಇರುತ್ತೆ ಅನ್ಸುತ್ತೆ ನಿಮ್ಗೆ, ಸ್ವಲ್ಪ ಆ ಟೈಮ್ ಗೆ ಹೋಗಿಬನ್ನಿ...
ಹಿಂದೆಯಿಂದ ಓಡಿ ಬಂದವಳೇ ಬೆನ್ನಮೇಲೆ ಏರಿ ನನ್ನ ಹಿಡ್ಕೊಂಡ್ಳು.. ಹಿಂದೆಯಿಂದ ಬಂದು ಕುತ್ತಿಗೆಗೆ ಕೈ ಹಾಕಿ ಬೆನ್ನ ಮೇಲೆ ಹತ್ತಿದ್ರೆ, ನಾನು ಕೂಡ ಕೈ ಹಿಂದೆ ಹಾಕಿ ಹಿಡ್ಕೋಳ್ಳಲೇ ಬೇಕು... ಹಿಡ್ಕೊಂದ್ಬಿಟ್ಟೆ... ಉಪ್ಪಿನಮೂಟೆ ಬೆನ್ನಮೇಲೆ ಏರಿಯೇ ಬಿಡ್ತು... :)

ಈಗ್ಲಾದ್ರೂ ಹೇಳು ಬಂಗಾರ....

ನಾ ಹೇಳೋ ದಾರೀಲಿ ನನ್ನ ಹೊತ್ಕೊಂಡು ಹೋಗು... :)

ಈಗಾಗ್ಲೇ ಹೊತ್ಕೊಂಡಿದ್ದೀನಿ ಕಣೆ.. ನೀ ಹೇಳೋ ದಾರೀಲಿ ಹೋಗೋದು ಅಷ್ಟೇ... :)

ಸೀದಾ ಹೋಗು, ರೈಟ್ ಹೋಗು, ರೈಟ್ ಹೋಗು, ಲೆಫ್ಟ್ ಹೋಗು.. ಲೆಫ್ಟ್ ಹೋಗು.. ರೈಟ್ ಹೋಗು... ಹೋಗ್ತಾ ಹೋಗ್ತಾ... ಅವ್ಳು ತಿಂತಿದ್ದ ಸೌತೆಕಾಯಿ ನನಗು ತಿನ್ಸಿದ್ಳು.. ಮತ್ತೆ ಅವ್ಳು ತಿಂದ್ಳು....ಹೀಗೆ ಅದು ಬದಲಾವಣೆ ಆಗ್ತಿತ್ತು... ಪ್ರತಿಸಲ ಕೇಳ್ದಾಗ್ಲು... ಏನಿಲ್ಲಾ ಅಂತ ಹೇಳ್ತಿದ್ಳು....

ನಿಂತ್ಕೋ.... 

ಹಾ ನಿಂತೇ... ಮುಂದೆ???? 

ಏನಿಲ್ಲಾ.... :) ಇಳಿಸು ನನ್ನ ಕೆಳಗೆ....

ಕೆಳಗೆ ಇಳಿಸಿದ ಮೇಲೆ ಮುಂದೆ ಬಂದು ನಿಂತ್ಳು.....ನಗ್ತಿದ್ದಾಳೆ,,, ನನ್ನೇ ನೋಡ್ತಿದ್ದಾಳೆ...

ಹಂಗೆ ನೋಡ್ಬೇಡ ಕಣೆ... ನಂಗೆ ಕಷ್ಟ ಆಗುತ್ತೆ.... ಹೇಳು... ಬೇಗ... 

ಏನಿಲ್ಲಾ.... ಸುತ್ತಾ ನೋಡು.. ಒಂದ್ಸಲ....

ಅರೆ..!!! ಅದೇ ದೇವಸ್ಥಾನ... (ದೇವಸ್ಥಾನದ ಮುಂಬಾಗಿಲಲ್ಲಿ ನಿಂತಿದ್ವಿ ಇಬ್ರು. ಅವ್ಳನ್ನ ಹೊತ್ಕೊಂಡು ಆ ದೇವಸ್ಥಾನ ಸುತ್ತು ಹಾಕಿದ್ದೀನಿ... ನಿಜವಾಗಿ ಹೇಳ್ಬೇಕು ಅಂದ್ರೆ ಸುತ್ತು ಹಾಕ್ಸಿದ್ದಾಳೆ....) ಹ.... ಮುಂದೆ...????

ಒಬ್ರನ್ನೊಬ್ರು ನೋಡ್ತಾನೆ ಇದ್ವಿ...
ಬಂದು ಗಟ್ಟಿಯಾಗಿ ಅಪ್ಕೊಂಡು, ತಲೆ ಮೇಲೆತ್ತಿ... ಕಣ್ಣನ್ನೇ ನೋಡ್ತಾ....

ನೀನಂದ್ರೆ ನಂಗೆ ಇಷ್ಟ ಕಣೋ.... I Love You.... :) (ಎರಡು ಹನಿ ಕಣ್ಣಿಂದ ಕೆಳಗೆ ಇಳೀತಾ ಇತ್ತು...)

ಅವಳ ಕಣ್ಣನ್ನೇ ನೋಡ್ತಾ... ಕೆಳಗೆ ಇಳೀತಿದ್ದ ಹನಿಗಳನ್ನ ಒರೆಸ್ತಾ...

ನೀನಂದ್ರೆ ನಂಗು ಇಷ್ಟ ಕಣೆ... I Love You tooo ಚಿನ್ನು.... 

ಹಣೆಗೆ ಮುತ್ತಿಟ್ಟೆ... ಕಣ್ಣುಬಿಟ್ಟೆ.... ಟೈಮು ನೋಡಿದ್ರೆ ಬೆಳಗಿನ ಜಾವ  4.37.

ಒಂದು ಸುಂದರ ಕನಸು.... :) ಆದ್ರೂ ತುಂಬ ಅದ್ಭುತ ಅನುಭವ.... ಮರ್ಯೋದಕ್ಕೆ ತುಂಬ ಕಷ್ಟ ಕಣ್ರೀ... ಏನೇ ಆಗ್ಲಿ ಅದು ಕನಸು ಮಾತ್ರ... ಅಷ್ಟಕ್ಕೇ ಖುಷಿ ಪಡಬೇಕು.... ಜಾಸ್ತಿ ಆಸೆ ಇಟ್ಕೊಬಾರ್ದು... ಬಿಸಿಲುಕುದುರೆ ಹಿಡಿತೀವಿ ಅಂತ ಅದರ ಹಿಂದೆ ಓಡಿದ್ರೆ ಅದು ಕೈಗೆ ಸಿಗುತ್ತಾ????

Wednesday, January 5, 2011

ಕನಸು...

ಕನಸುಗಳೆಲ್ಲ ನಿಜವಲ್ಲ, ನಿಜವಾಗುವ ಕನಸೇ ಕಾಣಬೇಕಿಲ್ಲ, ಕಂಡ ಕನಸು ನಿಜವಾಗಬೇಕಿಲ್ಲ. 
ಮನಸಿನೊಳಗಿನ ನಿನ್ನೊಂದಿಗೆ ನೀನು ನಿರ್ಭಯವಾಗಿ ಸಂವಾದಿಸುವ ಸುವರ್ಣ ಸುಂದರ ಸಮಯ ಕನಸು. ಕನಸಿನಿಂದ ಏನನ್ನು ಬಯಸದೆ ಆ ಕ್ಷಣಗಳ ಅನುಭವಿಸುದೆ ಒಂದು ಅದ್ಭುತ ಅನುಭವ.

Sunday, August 8, 2010

ನನ್ನವಳು...

೨.

ಹೌದು, ಅದೇ, ಆ ದಿನ 14ನೇ ಏಪ್ರಿಲ್ 2006, ನಾನು ನನ್ನ ಗೆಳೆಯರು ಹಾಗೆ ಸುಮ್ನೇ ಸುತ್ತೋಕೆ ಅಂತ ಹೊರ್ಟಿದ್ವಿ (ಆಗ ನಂಗೆ ಇನ್ನೂ ಗೆಳತಿ/ಗೆಳತಿಯರ ಪರಿಚಯ ಆಗಿರ್ಲಿಲ್ಲ ;) :) ). ನಮ್ ದೋಸ್ತ್ ಶ್ಯಾಮ್ ಯಾವಾಗ್ಲೂ ಲೇಟ್, ಆದಿನ ಕೂಡ ಲೇಟೆ ಅವ್ನು. ಕಾದು ಕಾದು ಸುಸ್ತಾಗ್ತಿತ್ತು, ಸರಿ ಇವನ್ನ ನಂಬಿದ್ರೆ ಆಗೋಲ್ಲ ಅಂತ ಹೊರ್ಡೋಕೆ ಎದ್ವಿ, "ಇರ್ರೋ, ಬಂದೆ ಕಣ್ರೋ.... ಬಿಟ್ಟು ಹೋಗ್ಬೇಡ್ರೋ.. ಪ್ಲೀಸ್ ವೇಟ್ ಮಾಡ್ರೋ... " ಅಲ್ಲೆಲ್ಲೋ ಕೂಗ್ತಿದ್ದಂಗೆ ಸಣ್ಣ ಸೌಂಡ್ ಕೇಳಿಸ್ತು. ತಿರುಗಿ ನೋಡಿದ್ರೆ, ಓಡಿ ಓಡಿ ಬರ್ತಿದ್ದ ಶ್ಯಾಮ. ದೂರದಿಂದ ಸಣ್ಣಗೆ ಕಾಣ್ತಿದ್ದ ಅವ್ನು, ನಮ್ಮನ್ನ ರೀಚ್ ಆಗ್ತಾ ಆಗ್ತಾ ಒರಿಜಿನಲ್ ಬಾಡಿ ಸೈಜು ಕಣ್ಮುಂದೆ ಬಂತು. ಇದಕ್ಕೂ ಮುಂಚೆ ಎಲ್ಲರ್ ಜೊತೆನು ಒಂದ್ ಒಂದ್ ಸ್ಮಾಲ್ ಫೈಟ್ಸ್ ಆಗಿತ್ತು, ಜಾಸ್ತಿ ದಿನ ಆದ್ಮೇಲೆ ಸಿಕ್ಕಿದ್ವಿ ಅಲ್ವಾ. ಹಂಗೆ ಕೆಲವು ಮಾತು ಬರುತ್ತೆ, ಕೆಲವು ಮಾತು ಹೋಗುತ್ತೆ. ಬೇಕಾದ್ದು, ಬೇಡದ್ದು, ಇರೋದು, ಇಲ್ದಿದ್ದು, ಎಲ್ಲ ಅಂದ್ರೆ ಎಲ್ಲ ಮಾತಾಡ್ತಾ ಟೈಮ್ಪಾಸ್ ಮಾಡ್ತಿದ್ವಿ. ಸೋ, ಈ ಮರಿ ಆನೆ ಎಂಟ್ರೀ ಆದ್ಮೇಲೆ, ಎಲ್ಲರ ಕಣ್ಣು ಈ ದೃಷ್ಟಿ ಬೊಟ್ಟಿನ ಮೇಲೆ ಬಿತ್ತು. ಮತ್ತೆ.. ಆಗಿನ ಟಾರ್ಗೆಟ್ ಇವ್ನೇ, ನಮ್ ಶ್ಯಾಮ.... ;) ;) . ಹ್ಮ್, ಶ್ಯಾಮನ ಕಾಲು, ಕೈ, ಇನ್ನೇನೇನ್ ಸಿಗುತ್ತೋ ಎಲ್ಲ ಎಳಿದ್ಮೇಲೆ, ಫೈನಲೀ ಹೋರ್ಡೋಣ ಅಂತ, ಹೊರ್ಡೋಕೆ ಶುರು ಮಾಡಿದ್ವಿ.






ಯಾವುದೇ ಅಡೆತಡೆ ಇಲ್ದೆ, ನಾವು ಸೇರ್ಬೇಕಿದ್ದ ಜಾಗ ಸೇರ್‌ಕೊಂಡ್ವಿ. ವ್ೂಊಓವವವ್ವ್... ನಿಜಕ್ಕೂ ಆ ಜಾಗ ಅತ್ಯದ್ಭುತ. ನೋಡೋಕೆ ಎರಡು ಕಣ್ಣು ಸಾಲೋದಿಲ್ಲ (ಅದ್ಕೆ ನಾನು 2+2 :) ), ನೆಟ್ಟಗೆ ನಿಂತು ಸುತ್ತ ಕಣ್ಣಾಡ್ಸಿದ್ರೆ, ಆಹಾ.. ಎಂಥ ಖುಷಿ ಅಂತೀರಾ. ಎಲ್ಲೆಲ್ಲಿ ನೋಡಿದ್ರೂ ಹಸಿರು, ಬರೆ ಹಸಿರು, ತಲೆ ಎತ್ತಿ ನೋಡಿದ್ರೆ ನೀಲಿ ಆಕಾಶ, ಬೆಳ್ಳಿ ಮೋಡಗಳು, ಅದರ ಚಿತ್ತಾರ. ತಣ್ಣಗೆ ಬೀಸ್ತಾ ಇದ್ದ ಗಾಳಿ ಕೆಲವೇ ಕ್ಷಣದಲ್ಲಿ, ಬೆಳ್ಳಿ ಮೋಡಗಳ್ಗೆ ಒಂದೊಂದು ಹೊಸ ಹೊಸ ರೂಪ ಕೊಡ್ತಾ ಇತ್ತು. ಕೆಲವೇ ಸೆಕೆಂಡ್ ಅಲ್ಲಿ ಯದ್ವಾ-ತದ್ವಾ ಚೇಂಜ್, ಆ ತಂಪಾದ ತಂಗಾಳಿ ಆದಿನ ಎಲ್ಲ ಮೋಡಗಳ್ನ ಒಟ್ಟಿಗೆ ಸೇರ್ಸಿ.. ನಮ್ಗಳ ಮೇಲೆ ಜೋರು ಮಳೆ ಸುರಿಸಿತ್ತು. ಅರ್ಧ ಘಂಟೆ ಮಳೇಲಿ ಚೆನ್ನಾಗಿ ನೆಂದು ಹಂಗೆ ಸುತ್ತ ಕಣ್ಣಾಡಿಸ್ತಿದ್ದಾಗ, ಅಲ್ಲಿ ದೂರದಲ್ಲಿ ಕಬ್ಬಿನ ಗದ್ದೆ. ಎಲ್ಲರ್ಗೂ ಪ್ಲಾನ್ ಓಕೇ ಆಯ್ತು... ಇದ್ದ ಜಾಗಕ್ಕೆ ಮತ್ತೆ ಬರುವ ಯೋಚನೆ ಮಾಡಿ, ಅಲ್ಲಿಂದ ಟೆಂಟ್ ಎತ್ತಿ ಕಬ್ಬಿನ ಗದ್ದೆ ಕಡೆ ಹೊರ್ಟ್ವಿ.


ಸುತ್ತ ನೇಚರ್ ನೋಡ್ಕೊಂಡು, ಮೇಲಿಂದ ಇಳಿದು ಗದ್ದೆ ಕಡೆ ಬಂದ್ವಿ. ಆ ಜಾಗ ಊರಿಂದ ಸುಮಾರು ದೂರ ಇದೆ ಅಂತ ಅನಿಸ್ತು. ಹಸಿದ ಆನೆಗಳಂತೆ ಕಬ್ಬಿನ ಗದ್ದೆಗೆ ನುಗ್ಗಿದ್ವಿ. ಈ ನುಗ್ಗಾಟದಲ್ಲಿ ಒಬ್ಬೊಬ್ರು ಒಂದೊಂದ್ ಕಡೆ ಹೋಗಿ, ಒಬ್ಬರ ಕೂಗು ಮತ್ತೊಬ್ಬರಿಗೆ ಕೇಳದೇ ಇರುವಷ್ಟು ದೂರ ಹೋಗಿದ್ವಿ. ಒಬ್ಬರಿಗೆ ಮತ್ತೊಬ್ರು ಕಾಣೋದಂತೂ ಕನಸು, ಯಾಕಂದ್ರೆ ಆ ಕಬ್ಬು ಅಷ್ಟು ಎತ್ತರಕ್ಕೆ ಬೆಳೆದಿತ್ತು. ಕಬ್ಬು ತಿಂದಾದ್ಮೇಲೆ ಬಂದ ದಾರೀಲಿ ವಾಪಸ್ ಹೋಗೋದು ಅಂತ ಮನಸಲ್ಲೇ ಡಿಸೈಡ್ ಮಾಡ್ಕೊಂಡೆ. ಮೊದಲಿನ ಪ್ಲಾನ್ ಅಂತೆ, ಎಲ್ಲರೂ ನಾವು ಮೊದಲು ಇದ್ದ ಜಾಗಕ್ಕೆ ಬಂದು ಕಾಯ್ಬೇಕಿತ್ತು, ಇದು ಹೀಗಾಗುತ್ತೆ ಅಂತ ಮೊದಲೇ ಪ್ರಿಡಿಕ್ಟ್ ಮಾಡಿದ್ದಾಗಿತ್ತು, ಆ ಗದ್ದೆ ಎಷ್ಟು ದೊಡ್ಡದಾಗಿತ್ತು ಅಂದ್ರೆ ಸ್ಟ್ರೇಟ್ ವ್ಯೂ ಅಲ್ಲಿ ಕಣ್ಣು ಎಷ್ಟು ದೂರ ಕವರ್ ಮಾಡುತ್ತೋ ಅಷ್ಟು ದೊಡ್ಡದಾಗಿತ್ತು :) .


ಗದ್ದೆ ಒಳಗೆ ನುಗ್ಗಿ, ಸುತ್ತ ನೋಡಿ, ಒಂದು ಅಂದಾಜಿನ ಮೇಲೆ ಯಾವ್ದು ತುಂಬಾ ಸ್ವೀಟ್ ಇರ್ಬಹುದು ಅಂತ ಗೆಸ್ಸ್ ಮಾಡಿ, ಸ್ವಲ್ಪನೆ ಬಳುಕಿದ್ದ, ಒಂದು ರೆಟ್ಟೆ ಸೈಜ್ ಇರೋ ಕಬ್ಬು ಮುರ್ದ್ಕೊಂಡೆ. ಅದರ ಬೇರು-ಸೋಗೆನ ಕೈ ಇಂದ ಕೀಳ್ತಾ, ಗದ್ದೆಯ ಒಂದು ಮೂಲೆ ಅನ್ಸೋ ಕಡೆ ಬಂದು ನಿನ್ತ್ಕೊಂಡೆ. ಸರಿಯಾಗಿ ನೋಡಿದ್ರೆ ಅದು ಮೂಲೆ ಅಲ್ಲ, ಅದು ಗದ್ದೆ ಮಧ್ಯೆ ಓಡಾಡೋಕೆ ಅಂತ ಸಣ್ಣಗೆ ಮಾಡಿರೋ ದಾರಿಯ ಒಂದು ಅಂಚಿನ ಮೂಲೆ ಅಷ್ಟೇ. ಕೈಲಿ ಇದ್ದ ಕಬ್ಬು ತಿನ್ನೋಕೆ ಶುರು ಮಾಡೋಣ ಅಂತ ಅಲ್ಲೇ ಕೂತ್ಕೊಂಡೆ. ಕಬ್ಬಿನ ಒಂದ್ ಕೊನೆನ ಬಾಯಲ್ಲಿ ಸಿಪ್ಪೆ ಸುಲ್ಯೋಕೆ ಅಂತ ಇಟ್ಕೊಂಡೆ. ಆಹಾ!!! ಆ ಸ್ವೀಟ್, ಆ ಜಾಗ್ದಿಂದ ನನ್ನ ಎಲ್ಗೊ ಕರ್ದ್ಕೊಂಡು ಹೋಯ್ತು, ಹಂಗೆ ಆಕಾಶದ ಕಡೆ ನೋಡ್ತಾ ಕಣ್ಣು ಮುಚ್ಕೊಂಡೆ. ಬಾಯಲ್ಲಿದ್ದ ಸ್ವೀಟ್ ಕಡ್ಮೆ ಆಗ್ತಿದ್ದಂಗೆ ಕಣ್ಣು ನಿಧಾನವಾಗಿ ಓಪನ್ ಆಗ್ತಿತ್ತು, ನೋಟ ಮೇಲಿಂದ ಕೈಲಿ ಇದ್ದ ಕಬ್ಬಿನ ಕಡೆ ಇಳೀತಿದ್ದಂತೆ, ಕಣ್ಣೋಟಕ್ಕೆ ಸ್ಟ್ರೇಟ್ ಆಗಿ , ಕಣ್ಣಳತೆಯ ದೂರದಲ್ಲಿ ಬಾಲೆ!!!!


ಒಟ್ಟು ಮೂವರು ಆ ಗದ್ದೆಯಲ್ಲಿ ಕಣ್ಣಾಮುಚ್ಚಾಲೆ ಆಡ್ತಿದ್ರು ಅನಿಸ್ತು. ನನಗೆ ನಾ ಏನ್ ಮಾಡ್ತಿದ್ದೀನಿ ಅಂತ ಗೊತ್ತಾಗೋದರ ಒಳಗೆ ನಾ ಎದ್ದು ನಿಂತು ಅವಳ ಕಡೆ ನಡೀತಾ ಇದ್ದೆ. ಹತ್ತಿರ ಹೋಗ್ತಿದ್ದಂಗೆ ಮೈಯಲ್ಲೆಲ್ಲಾ ಏನೋ ಒಂದ್ತರಾ ಆಗ್ತಾ ಇತ್ತು, ಅವಳ ರೂಪ ಆಕೃತಿ ಕ್ಲಿಯರ್ ಆಗ್ತಾ ಬಂತು. ಕೂಗಳತೆಯ ದೂರಕ್ಕೆ ಬಂದಾಗ, ಅಲ್ಲಲ್ಲಿ ಕಲರ್-ಕಲರ್ ಫ್ಲವರ್ ಇದ್ದ, ಪ್ಯೂರ್ ವೈಟ್ ಚೂಡಿದಾರ್ ಹಾಕಿದ್ದ ಅವಳು, ಸರ್ರ್ ಅಂತ ಪಕ್ಕಕ್ಕೆ ಓಡಿದ್ಲು. ತಣ್ಣಗೆ ಬೀಸ್ತಿದ್ದ ಗಾಳಿಗೆ ಹಾರಾಡ್ತಿದ್ದ ಕಪ್ಪಗೆ ನೀಳ ಇದ್ದ, ಕಟ್ಟದೇ ಬಿಟ್ಟಿದ್ದ ಅವಳ ತಲೆಯ ಕೂದಲು ಮಾತ್ರ ಕಂಡು, ಹಿಂದೆನೇ ಹೋದೆ. ಅಷ್ಟ್ರಲ್ಲಿ "ಅಕ್ಕ, ನನ್ನ ಹುಡ್ಕು, ನಾ ಎಲ್ಲಿದ್ದೇನಿ ಹೇಳು" ಅನ್ನೋ ಸೌಂಡ್ ಕೇಳಿಸ್ತು. ಅವ್ಳು ಅವ್ರಿಬ್ಬರ್ಗು ಅಕ್ಕ ಆಗಿರ್ಬೇಕು ಅಂತ ಅನಿಸ್ತು. ಹಾಗೆ ಮುಂದೆ ಹೋಗ್ತಾ ಅವ್ಳನ್ನೇ ಹುಡುಕ್ತಿದ್ದೆ. ಸ್ವಲ್ಪ ಮುಂದೆ, ಇನ್ನೂ ಸ್ವಲ್ಪ ಮುಂದೆ ಹೋಗಿ ಎಡಕ್ಕೆ ತಿರುಗಿ ನೋಡಿದ್ದ್ರೆ... ವೂವ್..!!! ಅದೇ ಕಣ್ಣು. ಅವಳೇ, ಅವಳೇ, ಆ ದಿನ ಆಸ್ಪತ್ರೆಲಿ ಮಿಂಚಿ ಮಾಯಾ ಆದ ಬೆಡಗಿ, ಅವಳೇ ಇವಳು!!!. ಮತ್ತೆ ಇವ್ಳನ್ನ ನೋಡ್ತೀನಿ ಅಂತ ನಾನು ಯೋಚನೆ ಕೂಡ ಮಾಡಿರ್ಲಿಲ್ಲ. ದೇವ್ರೆ ನಿಂಗೆ ಥ್ಯಾಂಕ್ಸ್, ಥ್ಯಾಂಕ್ಸ್ ಥ್ಯಾಂಕ್ಸ್ ಅಂತ ಸಾವ್ರ ಸಲ ಮನ್ಸಲ್ಲಿ ಅಂದ್ಕೊಂಡು ಅವಳ ಹತ್ರ ಹೋದೆ. ಆಟದಲ್ಲಿ ಚಿಕ್ಕ ತಮ್ಮ, ತಂಗಿನ ಹುಡುಕ್ತಿದ್ದ ಅವಳ ಕಣ್ಣು ನನ್ನ ಕಣ್ಣಿನ ಕಡೆ ನೋಡ್ತು. ಕಣ್ಣು!!!, ಅಬ್ಬಾ ಏನು ಮ್ಯಾಜಿಕ್ ಅದು. ಕಣ್ಣಲ್ಲೇ ಏನೇನೆಲ್ಲ ಮಾಡ್‌ಬಹುದು. ಉಸ್ಸ್ಸ್ಸ್ಸ್... ಸುಸ್ತಾದೆ.. ಇನ್ನೂ ಜಾಸ್ತಿ ಆ ಕಣ್ಣುಗಳ್ನ ನೋಡೋಕೆ ಆಗ್ದೇ, ಅವಳ ಹತ್ತಿರ ಹೋದೆ. ಒಂದೇ ಒಂದು ಮಾತು ಕೂಡ ಇಲ್ಲ, ಆದ್ರೆ ಕಣ್ಣುಗ್ಳು ಏನೇನ್‌ಬೇಕೋ ಎಲ್ಲ ಮಾತಾಡ್ತಿದ್ವು. ಆ ಮಾತಿನಲ್ಲಿ ಒಂದು ನಿರ್ಧಾರ ಆಯ್ತು, ಎಲ್ಲ ಓಕೇ ಆಯ್ತು... ವೋವ್ವವ್ವ್!!!... ಆಸಮ್!!! ಹೆಂಗೆಂಗೋ ಆಗಿ, ಹಿಂಗೆ ಓಕೇ ಆಗ್ಬಿಡ್ತು. ಹ್ಹ ಹ ಹ ಹ. ಮತ್ತೆ ಪರ್ಮಿಶನ್ ಸಿಕ್ಕಿಡ್ಮೇಲೆ ನನ್ನ ಕೈ ಅವಳ ಕೈ ಹಿಡ್‌ಕೋಳೋಕೆ ಅಂತ ಹತ್ತಿರ ಹೋಗ್ತಿತ್ತು. "ಲೋ ಗುಂಡಾ, ಎದ್ದೇಳೋ ಮೇಲೆ ಎಲ್ಲಿ ಹಾಳಾಗ್ ಹೋಗಿದ್ಯೋ, ನಿನ್ನ ಒಬ್ಬನ್ನೇ ಬಿಟ್ಟು ಹೋಗೋಕೆ ಮನ್ಸಾಗ್ದೆ ಹುಡುಕ್ಕೋಂಡ್ ಬಂದ್ವಿ, ಎದ್ದೇಳು ಮೇಲೆ".


ಛೇ, ಎಂತ ಸುಂದರ ಕನಸು, ಡಬ್ಬ ನನ್ ಮಗ ಹಾಳ್ ಮಾಡ್ಬಿಟ್ಟ ಅಂತ ಬೈಕೊಂಡು ಎದ್ದು ಅವರ ಜೊತೆ ಹೋಗೋಕೆ ರೆಡೀ ಆದೆ. ಹಂಗೆ ಸ್ವಲ್ಪ ಸ್ಟ್ರೇಟ್ ಹೋಗ್ತಿದ್ದಂಗೆ ಅದೇ ಹಿಂದಿನ ಸುಂದರ ಹಸಿರು ಕಾಣೋಕೆ ಶುರು ಆಯ್ತು. ಅಲ್ಲಂತೂ ಎಲ್ಲ ಮಿಸ್ ಆಯ್ತು, ಈ ಪ್ರಕೃತಿ ಸವಿಯನ್ನಾದ್ರು ಸವ್ಯೋಣ ಅಂತ ಖುಷಿ ಇಂದ, ಯದ್ವಾ-ತದ್ವಾ ಮಾತಾಡ್ತಾ ಗೆಳೆಯರ ಜೊತೆ, ಮತ್ತೆ ಮೊದಲಿದ್ದ ಪ್ಲೇಸ್ ಹತ್ರ ಬರ್ತಿದ್ದೆ. ಆಹಾ!!! ಅದೇ ಜಾಗ, ಅಲ್ಲೇ ನಿಂತು ಈ ಕಬ್ಬಿನ ಗದ್ದೆ ನೋಡಿದ್ದು, ಅಲ್ಲಿ ಸುಂದರ ಕನಸು ಕಂಡಿದ್ದು, ಕಾಣ್ತಿದೆ, ಕಾಣ್ತಿದೆ ಬಂದೆ ಬಂದೆ. "ಮಗು ಗುಂಡಾ, ಎದ್ದೇಳೊ ಬೆಳಗಾಯ್ತು, ಕಾಲೇಜ್ ಗೆ ಹೋಗ್‌ಬೇಕು".

Tuesday, September 29, 2009

ನನ್ನವಳು...

ಗುಂಡ, ಒಬ್ಬ ಸೋಮಾರಿ, ಸಮಯ ಸ್ವಾಹ ಮಾಡುವವನು. ಗುಂಡನ ಲೋಕದಲ್ಲಿ, ಗುಂಡನಿಗೆ ಅವನದೇ ಆದ ಕೆಲವು ಆಟ-ಪಾಠಗಳು, ಕನಸಿನ ಲೋಕಗಳು, ಅನುಭವಗಳು, ಕನಸುಗಳು. ಅವನ ಲೋಕದಲ್ಲಿ ಅವನು ಬಿಟ್ಟು ಮತ್ಯಾರು ಇಲ್ಲ. ಅವನಿಗೆ ಯಾಕೋ-ಏನೋ ಅವನ ಲೋಕದ ಬಗ್ಗೆ ನಿಮಗೆಲ್ಲ ತಿಳಿಸಬೇಕು ಅಂತ ಆಸೆ ಆಗಿದೆಯಂತೆ, ಸಣ್ಣ ಕಥೆ ಥರ ಹೇಳ್ತೀನಿ ಅಂತಿದ್ದಾನೆ, ಈ ಕಥೆಗಳನ್ನು ಅವನ ಮಾತಿನಲ್ಲೇ ಕೇಳಿಸಲು, ನಾನೊಂದು "ಮಾಧ್ಯಮ".

೧ .
ಅಂದೊಂದು ದಿನ ೨೬ನೇ ಸೆಪ್ಟೆಂಬರ್ ೨೦೦೩ ಶುಕ್ರವಾರ, ನನಗೆ ಪರಿಚಯದ ಒಬ್ರಿಗೆ ಹುಷಾರು ತಪ್ಪಿತ್ತು, ಅವ್ರು ಆಸ್ಪತ್ರೆಯಲ್ಲಿದ್ರು, ಅವ್ರನ್ನ ನೋಡಿ, ಮಾತಾಡ್ಸ್ಕೊಂಡು ಬರೋಣ ಅಂತ ನಾನು ಆಸ್ಪತ್ರೆಗೆ ಹೋಗಿದ್ದೆ. ಆ ರಿಸೆಪ್ಶನಿಸ್ಟ್, ಸೆಕ್ಯೂರಿಟಿ, ಅವ್ರು ಇವ್ರನ್ನ ನೋಡ್ಕೊಂಡು, ಹಾಗೆ ಕ್ಷೇಮ ( :) ) ಸಮಾಚಾರ ವಿಚಾರಿಸ್ತಾ, ನಮ್ ಪರಿಚಯದವರ ಬೆಡ್ ಹತ್ರ ಹೋದೆ. ಡಾಕ್ಟ್ರು ಮತ್ತೆ ನರ್ಸ್ ಒಳ್ಳೆ ಹಾರೈಕೆ ಮಾಡ್ತಿದ್ರು, ಹಾಗಾಗಿ ಅವ್ರು ಎಲ್ಲದಕ್ಕಿಂತ ಸ್ವಲ್ಪ ಬೇಗ ಹುಷಾರಾಗ್ತಿದ್ರು. ಸರಿ, ಅವರ ಜೊತೆ ಒಂದ್ ಹತ್-ನಿಮ್ಷ ಮಾತಾಡಿದ್ಮೇಲೆ, ಮನೆ ದಾರಿ ಹಿಡ್ಯೋಣ ಅಂತ, ಅವ್ರಿಗೆ ವಿದಾಯ ಹೇಳಿ, ಆರೋಗ್ಯದ ಕಡೆ ಗಮನ ಇರಲಿ ಅನ್ನೋ ಕಿವಿಮಾತು ಕಿವಿಗೆ ಹಾಕಿ, ಕೂತಿದ್ದ ಜಾಗದಿಂದ ಎದ್ದು ಹೊರಟೆ.

ಅವರ ಬೆಡ್ ಇಂದ ಹೊರಗೆ ಬರೋ ದಾರಿಲಿ (ಒಳಗೆ ಹೋಗ್ಬೇಕಾದ್ರು ಅದೇ ದಾರಿನೇ :) ), ಎಡ-ಬಲ ಎರಡೂ ಕಡೆಗಳಲ್ಲಿ, ಒಬ್ರು-ಇಬ್ರು ರೋಗಿಗಳು ಇರಬಹುದಾದ ರೂಂಗಳ ಸಾಲು. ನಡಿಬೇಕಾದ್ರೆ ಸುಮ್ನೆ ನಡ್ಯೋಕೆ ಆಗುತ್ತಾ, ತಲೆ-ಕಣ್ಣು ನಿಲ್ಬೇಕಲ್ವ? ಹಾಗೆ ಅಲ್ಲಿ-ಇಲ್ಲಿ ಕಣ್ಣು ಹಾಯಿಸ್ತಾ ನಡಿತಿದ್ದೆ. ನಡಿಗೆಯ ಸ್ಪೀಡು ಗಡಿಯಾರದ ಘಂಟೆ ಮುಳ್ಳಿನ ಸ್ಪೀಡು ಎರಡು ಒಂದೇ ಆಗಿತ್ತು, ಆದ್ರೆ ಕಣ್ಣು ಅದೇ ಗಡಿಯಾರದ ಸೆಕೆಂಡ್ ಮುಳ್ಳಿಗಿಂತ ಜಾಸ್ತಿ ಸ್ಪೀಡಾಗಿ ಓಡ್ತಿತ್ತು. ನಡಿಗೆಯ ಗತಿ (ಸ್ಪೀಡು), ಒಂದೇ ಕ್ಷಣದಲ್ಲಿ ಚೇಂಜ್ ಆಗೋಯ್ತು, ಕಾಲ್ಗಳು ಸುಮಾರು ೨ ಹೆಜ್ಜೆ ಹಿಂದೆ ಹೋದ್ವು, ತಲೆ ಎಡಕ್ಕೆ ತಿರುಗ್ತಿದ್ದಂಗೆ ಕಣ್ಣು ಏನನ್ನೋ ಹುಡ್ಕೋಕೆ ಶುರು ಮಾಡ್ಕೊಂದ್ಬಿಡ್ತು. ಹತ್ತು ಸೆಕೆಂಡ್ ನ ತುಡಿತ, ಹತ್ತು ವರ್ಷಗಳಷ್ಟು ಕಾಯ್ಕೊಂಡು ಕೂತಿದ್ನೇನೋ ಅಂತ ಅನಿಸ್ಬಿಡ್ತು. ಯಾಕಂದ್ರೆ ಅಲ್ಲಿ, ಆ ಹತ್ತು ಸೆಕೆಂಡ್ಗಳ ಅಂತರದಲ್ಲಿ, ನನ್ನ ೧೬ ವರ್ಷಗಳ ಜೀವಮಾನದಲ್ಲಿ ಕಾಣದ ರೂಪರಾಶಿ, ಸ್ವಪ್ನ ಸುಂದರಿಯ (Dream Girl) ಕಂಡೆ.

ಕಾಲುಗಳು ಆಪೋಸಿಟ್ ಡೈರೆಕ್ಷನ್ ಅಲ್ಲಿ ಹೋಗಿ, ತಲೆ ಎಡಕ್ಕೆ ತಿರುಗಿ, ಕಣ್ಣು ಹುಡುಕಾಟ ಶುರುಮಾಡ್ದಾಗ ಮೊದಲು ಕಂಡದ್ದು ಅವಳ ಬೆಳ್ಳಿ ಸೀರೆಯ ಸೆರಗಿನ ಹಾರಾಟ. ಅದರ ಹಾರಾಟದ ಜೊತೆ-ಜೊತೆಯಲಿ, ಕಣ್ಣಿಂದ ಏನೋ ಒಂದು ಮಿಂಚು, ನೆತ್ತಿಗೆ ಏರಿ, ನೆತ್ತಿಯಿಂದ ನೇರವಾಗಿ ಹೃದಯಕ್ಕೆ ಬಂತು, ಅಷ್ಟರಲ್ಲಿ ನಾನು ನನ್ ಕಣ್ಣು ಮುಚ್ಚಿದ್ದೆ. ಮುಂದೆ ಕಂಡದ್ದೆಲ್ಲಾ ಸುಂದರ-ಸುಮಧುರ ಸ್ವಪ್ನ (ಕನಸು). ಅವಳ ನೋಟ ಕಂಡ ಕ್ಷಣದಲ್ಲೇ ನಾನು ಕಣ್ಣು ಮುಚ್ಚಿದ್ದೆ, ತಿಳಿ ಹಾಲ ನಿಂತ ನೆಲೆಯ ಮಧ್ಯೆ ಹೊಳೆವ ಕಪ್ಪು ಹಣತೆಯ ಬೆಳಕಿನಂತೆ ಅವಳ ಕಣ್ಣು ಬೆಳಗುತ್ತಿತ್ತು, ನೋಟ ಹೊಳೆಯುತ್ತಿತ್ತು. ಆ ನೋಟದ ಕಾಂತಿ ನನ್ ಕಣ್ಣು ಮಂಜಾಗಿಸಿತ್ತು, ಮನಸ ನಂಜಾಗಿಸಿತ್ತು. ಹಿಡಿದು ಬಗ್ಗಿಸಿದ ಕಾಮನಬಿಲ್ಲಿನ ಹುಬ್ಬು, ಅಗಾಗ ಬಾಗುತಿತ್ತು, ತಂಪು ತಂಗಾಳಿಗೆ ತೇಲಿಬರುವ ತೆಳು ಅಲೆಯಂತೆ ಕೆನ್ನೆಯ ಗುಳಿ. .......... ಇದೆಲ್ಲದರ ಜೊತೆ, ಬಿಲ್ಲಿನ ಹುಬ್ಬುಗಳ ಮಧ್ಯೆ ಮಿನುಗುತ್ತಿದ್ದ ಕೆಂಪು ಕುಂಕುಮ, ಅಂದವನ್ನು ಇನ್ನೊ ಹೆಚ್ಚಿಸಿತ್ತು. ನಾನು ಕಣ್ಮುಚ್ಚಿದಾಗ, ಬೆಳ್ಳಿಮೋಡದ ಬೆಳ್ಳಿ ಅಂಚಿನ ಹಾಲ ಹಾದಿಯಲಿ, ಸುಡುವ ತಂಗಾಳಿಗೆ ಮೈಯೊಡ್ಡಿ, ಪಂಜರದಿಂದ ಪಾರಾದ ಪುಟ್ಟ ಹಕ್ಕಿಯಂತೆ ಹಾರುತ್ತಿದ್ದ, ತೇಲುತ್ತಿದ್ದ ಶುದ್ಧ ಬಿಳಿಯ ಬಟ್ಟೆ ತೊಟ್ಟ ಸುಂದರಿ ಮೊದಲು ಕಂಡಳು. ಮಯೂರಿಯ ನಾಟ್ಯ ನಡಿಗೆಯ ಹಿಂಬಾಲಿಸಿ ಹೊರಟಿದ್ದ ನಾನು, ಅವಳ ಮುಖಕಮಲದ ದರ್ಶನಕ್ಕಾಗಿ ಕಾದಿದ್ದೆ. ಹಿಂದೆ ಹೊರಟಿದ್ದ ನಾನು, ಸಪ್ತ ಸಾಗರ ದಾಟಿದ್ದೆ, ಸುಂದರ ಬನಗಳಲ್ಲಿ ನುಗ್ಗಿದ್ದೆ, ಭವ್ಯ ಭಾರತದ ಶಿರೋಮಣಿ ಹಿಮಾಲಯ ಶಿಖರ ಏರಿದ್ದೆ. ಬಿದಿಗೆ ಚಂದ್ರನ ಬದಿಯಲ್ಲಿ ನಿಂತು ಕಮಲವದನೆಯ ಕಮಲವದನವ ನೋಡುವ ಕಾತರದಲ್ಲಿದ್ದೆ, ಅಬ್ಬಾ ಕೊನೆಗೂ ಕಂಡೆನಾನವಳವದನ. ಲೇ ಗುಂಡ, ಕಣ್ ಬಿಡೋಲೆ!!! ಎಲ್ಲಿದ್ದೀಯ? ನನ್ ಪರಿಚಯದವರ ದನಿ ನನ್ ಕಿವಿಗೆ ಬಿತ್ತು, ಕಣ್ಣು ಬಿಟ್ಟೆ.