Custom Search

Sunday, April 27, 2014

ಏರ್ಪೋರ್ಟ್ನಲ್ಲಿ ಎರಡೂವರೆ ಘಂಟೆ....

ನಮಸ್ಕಾರ ಫ್ರೆಂಡ್ಸ್... ಬರೆದು ಜಾಸ್ತಿ ದಿನ ಆಯಿತು.. ಏನಾದ್ರೂ ಬರೀಬೇಕು ಅಂತ ಮನಸ್ಸು ಹೇಳ್ತಾ ಇತ್ತು.. ಆದ್ರೆ ಸಮಯ ವಿಷ್ಯ ಎರಡು ಸಿಗ್ತಿರ್ಲಿಲ್ಲ.... :) ಹಂಗೆ ಒಂಚೂರು ಇರ್ಲಿ ಅಂತ ಈಗ ಈ ಅನುಭವ ನಿಮ್ಮ ಮುಂದೆ...

ವಿಷಯ ಇಷ್ಟೇ... ಗೆಳೆಯ ಸಂದೀಪ್, US ಇಂದ ಬರ್ತಿದ್ದ.... ನಂಗೆ ಬೇಕಾದ ಕ್ಯಾಮೆರಾ ಲೈಟ್ಸ್ ಸೆಟ್ ತರ್ತಾ ಇದ್ದ... ಅದನ್ನ ಅವನಿಂದ ಇಸ್ಕೊಬೇಕಿತ್ತು ಅದಕ್ಕೆ ನಾನು ಏರ್ಪೋರ್ಟ್ ಗೆ ಹೋಗ್ಬೇಕಿತ್ತು...

ಫ್ಲೈಟ್ ಬೆಳಗಿನ ಜಾವ 4 ಘಂಟೆಗೆ ಬರುತ್ತೆ ಅಂತ ಗೊತ್ತಿತ್ತು, ಆದ್ರೆ ಅದರ ವಿಚಾರ, ಹೆಚ್ಚಿನ ಮಾಹಿತಿ
ಹೇಗೆ? ಏನು? ಎತ್ತ? ಯಾವುದೇ ಐಡಿಯಾ ಇರ್ಲಿಲ್ಲ. ಅದಕ್ಕೆ ಸ್ವಲ್ಪ ಬೇಗ ಹೋಗೋಣ ಅಂತ ಪ್ಲಾನ್ ಮಾಡ್ಕೊಂಡೆ. ಹೊರಡೋ ಒಂದೆರಡು ದಿನ ಮೊದೆಲೇ ಹೇಗೆ ಹೋಗ್ಬೇಕು, ಅದಕ್ಕೆ ಹೇಗೆ ರೆಡಿ ಆಗಬೇಕು ಅಂತ ಸ್ವಲ್ಪ ಮಾಹಿತಿ ಕಲೆಹಾಕಿದ್ದೆ. ಅದರ ಪ್ರಕಾರ, ರಾತ್ರಿ 2 ಘಂಟೆಗೆ ಮನೆ ಇಂದ ಹೊರಟು, ಮೆಜೆಸ್ಟಿಕ್ ತಲುಪಿ ಅಲ್ಲಿಂದ 3 ಘಂಟೆಗೆ ಇರುವ ಏರ್ಪೋರ್ಟ್ ಬಸ್ (ವಾಯು ವಜ್ರ) ಅಲ್ಲಿ ಹೋಗೋಣ ಅನ್ಕೊಂಡಿದ್ದೆ. ಆದ್ರೆ ಆಗಿದ್ದೆ  ಬೇರೆ, 2:05 ಕ್ಕೆ ಮೆಜೆಸ್ಟಿಕ್ ಅಲ್ಲಿ ಇದ್ದೆ, ಅಲ್ಲೇ  ಇದ್ದ ವಾಯು ವಜ್ರ ಕಣ್ಣಿಗೆ ಬಿತ್ತು, ತಡ ಮಾಡದೇ ಹೋಗಿ ಹತ್ಕೊಂಡ್ಬಿಟ್ಟೆ. ಸುಮಾರು 2:13ಕ್ಕೆ ಹೊರಟ ನಮ್ಮ ವಜ್ರ, 2:53ಕ್ಕೆ ಏರ್ಪೋರ್ಟ್ ತಲುಪಿಸ್ತು.

ಬಸ್ ಇಂದ ಇಳಿದ್ಮೇಲೆ ಏನ್ ಮಾಡ್ಬೇಕು ಗೊತ್ತಾಗ್ಲಿಲ್ಲ, "ಅರ್ರೈವಲ್ಸ್ ಹತ್ರ ಇರು" ಅಂತ ಗೆಳೆಯ ಹೇಳಿದ್ದು ಬಿಟ್ರೆ ಏನು ಗೊತ್ತಿಲ್ಲ. ಮೊದಲ್ನೇ ಸಲ ಏರ್ಪೋರ್ಟ್ ಗೆ ಹೋಗಿದ್ದು, ಏನೋ ಒಂಥರ ಹೊಸ ಅನುಭವ. ಅಲ್ಲೇ ಇದ್ದ ಕಸ ಗುಡಿಸುವ ಹುಡುಗನ್ನ ಕೇಳಿದೆ.

ಇವ್ರೆ!! ಅರ್ರೈವಲ್ಸ್ ಗೆ ಯಾವ ಕಡೆ ಹೋಗ್ಬೇಕು?
ಅಲ್ನೋಡಿ ಸರ್, ಅಲ್ಲೇ ಕಾಣ್ತಿದೆ... ಹೀಗೆ ಹೋಗಿ....


ಮುಂದೆ ಕಾಣ್ತಿದ್ದ ಅರ್ರೈವಲ್ಸ್ ಕಡೆ ಹೋಗ್ತಿದ್ದಂಗೆ "RR (ರೋಲ್ಸ್ ರೋಯ್ಸ್)" ಸ್ವಾಗತ ಮಾಡ್ತಿತ್ತು... ಹಂಗೆ ಒಂದು ಫೋಟೋ ಕ್ಲಿಕ್ ಮಾಡಿ ಮುಂದೆ ಹೋದೆ. ಜನ ಅಷ್ಟು ಇರ್ಲಿಲ್ಲ, ಆದ್ರೆ ಗುಂಪುಗಳು ಇದ್ವು. ಇದ್ದವರು ಕೆಲವರೇ ಆದ್ರು ಒಬ್ಬೊಬ್ರೇ ಇದ್ದಿದ್ದು ತುಂಬಾ ಕಡಿಮೆ. ಅಲ್ಲೇ "subway" ಪಕ್ಕ ಇದ್ದ ವೈಟಿಂಗ್ ಸೀಟ್ಸ್ ಅಲ್ಲಿ ಕೂತಿದ್ದ ಒಂದೇ ಕಮ್ಯೂನಿಟಿ ಜನ, "subway" ಟೇಬಲ್ ಅಲ್ಲಿ ಕೂತಿದ್ದ ವಿದೇಶಿಯರು, ದೇಶಿಯರು, ಹಾಗೆ ಮುಂದಿನ ಗೇಟ್ ಹತ್ರ ಹೋಗ್ತಿರ್ಬೇಕಿದ್ರೆ ಬಲಗಡೆ ಕಂಡ "ChaiPoint", ಮುಂದೆ ಹೋದ್ರೆ "HattiKaapi". ಒಂದು ರೌಂಡ್ ಹಾಕಿ ವಾಪಾಸ್ ಬಂದು ವೈಟಿಂಗ್ ಸೀಟ್ಸ್ ಅಲ್ಲಿ ಕೂತ್ಕೊಂಡೆ.

ಒಂದೈದು ನಿಮಿಷ ಅಲ್ಲೇ ಅಡ್ಡಾಡ್ತಾ ಇದ್ದ ಜನರನ್ನ ನೋಡ್ತಾ ಕೂತಿದ್ದೆ, ಘಂಟೆ 3 ಆಗಿತ್ತು. ಒಬ್ನೇ ಕೂತ್ಕೊಂಡು ಏನ್ ಮಾಡ್ಲಿ? ಯಾರ ಹತ್ರ ಆದ್ರು ಮಾತಾಡೋಣ ಅಂದ್ರೆ ಅಪರಿಚಿತ ವ್ಯಕ್ತಿಗಳು, ಸುಮ್ನೆ ಯಾಕೆ ಕಿರಿಕ್ಕು... ನಮ್ಮ ವೇಸ್ಟ್ ಫ್ರೆಂಡ್ಸ್ ಗೆ ಕಾಲ್ ಮಾಡೋಣ ಅಂದ್ರೆ ರಾತ್ರಿ 3 ಘಂಟೆ, ಯಾಕೆ ಬೇಕು ಹೇಳಿ. ರಾತ್ರಿ ಸರಿಯಾಗಿ ನಿದ್ದೆ ಇಲ್ಲ, ಹಾಗಾಗಿ ಕಣ್ಣು ಸ್ವಲ್ಪ ನಿದ್ದೆ ಕಡೆಗೆ ಜಾರ್ತಿತ್ತು. ಪಕ್ಕದ "ChaiPoint" ಇಂದ ಕರೆ ಬರ್ತಾ ಇತ್ತು. ಹಂಗೆ ಎದ್ದು ಹೋದೆ...

ಒಂದು ಟೀ ಕೊಡಿ...
ಪ್ಲೈನಾ...???
ಹು.. ಅದೇ ಕೊಡಿ....
ಗುರು... ಸಕ್ಕರೆ ಹಾಕಿದ್ಯಾ??? ನಾವೇ ಹಾಕ್ಕೊಬೇಕಾ???
ಹೇ ಸರ್....

ಸುತ್ತ ಅಷ್ಟು ಚಳಿ ಇಲ್ದೆ ಇದ್ರೂ ಬೇಗ ಟೀ ಕುಡಿಬೇಕು ಅಂತ ಕುಡಿಯೋಕೆ ಶುರು ಮಾಡಿದೆ... ನಾಲಿಗೆ ಸುಟ್ಟು ಹೋಯ್ತು... :D ಆಗ್ಲೇ ಗೊತ್ತಾಗಿದ್ದು... "ಹೊಗೆ ಬರ್ತಿಲ್ಲ ಅಂದ್ರು ಕೂಡ ಆತುರ ಪಡಬಾರದು" ಅಂತ.. :P. ಅಲ್ಲೇ ನಿಂತ್ಕೊಂಡು.... ಉಫ್ಫ್ ಉಫ್ಫ್ ಉಫ್ಫ್ ಅನ್ಕೊಂಡು ಟೀ ಕುಡಿದು ಮುಗಿಸ್ದೆ. ಕುಡಿದು ಆದ್ಮೇಲೆ ಮತ್ತೇನು ಕೆಲ್ಸಾ, ವಾಪಾಸ್ ಬಂದು ಸೀಟ್ ಅಲ್ಲಿ ಕೂತ್ಕೊಂಡೆ. ಏನು ಮಾಡೋದು ಗೊತ್ತಾಗ್ತಿಲ್ಲ, ಮೊಬೈಲ್ ತೆಗೆದು ಗೇಮ್ ಆಡ್ತಾ ಕೂತ್ಕೊಂಡೆ, 5 ನಿಮಿಷ ಅಷ್ಟೇ, ಬೋರ್ ಆಗೋಕೆ ಶುರು ಆಯ್ತು. ಅಷ್ಟೇ, ಮೊಬೈಲ್ ಜೇಬಿನೊಳಗೆ ಇಟ್ಟೆ, ಮನಸು ಅಲ್ಲಿದ್ದ ಜನರ ಕಡೆಗೆ ಬಿಟ್ಟೆ.... :)

ನಾನು ಕೂತಿದ್ದ ಸಾಲಿನಲ್ಲಿ ಒಬ್ಳೇ ಹುಡುಗಿ ಕೂತಿದ್ಲು... :P ನಾನು ಕೊನೆಯಲ್ಲಿ ಕೂತಿದ್ರೆ, ಅವಳು ಸಾಲಿನ ಮಧ್ಯೆ ಇದ್ಳು, 3-4 ಸೀಟ್ ಗ್ಯಾಪ್ ಅಷ್ಟೇ... ಒಂದು ನಿಮಿಷ ನೋಡ್ತಿದ್ದೆ, ಹಿಂದೆ ಏನೋ ಸದ್ದಾಯ್ತು, RR ಅಲ್ಲಿಂದ ಹೋಗಿದ್ದಿದ್ದು ಆಗ ಗೊತ್ತಾಯ್ತು... ಮತ್ತೆ ಬಲಕ್ಕೆ ತಿರುಗಿದ್ರೆ ಆ ಹುಡುಗಿ ಅಲ್ಲಿಲ್ಲ... ಅರೆ!! ಈಗ ಇಲ್ಲೇ ಇದ್ಳು... ಅಷ್ಟ್ರಲ್ಲೆ ಎಲ್ಲಿಗೆ ಹೋದ್ಳು???? ಕಣ್ಣುಗಳು ಹುಡುಕ್ತಾ ಇದ್ವು...ಅಷ್ಟ್ರಲ್ಲೆ ಅವಳು ಅವಳ ಅಪ್ಪನ್ನ ಅಪ್ಪಿಕೊಂಡಿದ್ದ ದೃಶ್ಯ ಕಣ್ಣಿಗೆ ಬಿತ್ತು...

ಎರಡು ನಿಮಿಷ ಹಾಗೆ ಆಕಡೆ ಈಕಡೆ ನೋಡ್ತಿದ್ದೆ, ಎದುರು ಒಂದು ಜೋಡಿ ಕಂಡ ಹಾಗೆ ಅನಿಸ್ತು... ವಾಹ್... ಅವಳ ಕೂದಲಲ್ಲಿ ಎಷ್ಟು ರಿಂಗ್ ಇದಾವೆ... ಎಣಿಸೋ ಅಷ್ಟರಲ್ಲಿ ಬೆಳಗಾಗುತ್ತೆ.. ಹೀಗೆಲ್ಲಾ ಯೋಚಿಸ್ತಾ ಇದ್ದೆ.
ಆಕೆ ಹಿಂದೆ ತಿರುಗಿದ್ಳು, ವಾಹ್ ಆಗಿದ್ದು... ಈಗ ಆಹ್... ಆಯಿತು.... :D ನೀವು ಏನಾದ್ರು ಊಹಿಸಿದ್ರೆ... ಹೌದು... ಅದು ನಿಜ... ಅದು ಆಕೆ ಅಲ್ಲ... ಆತ.. ಅದು ಹುಡುಗ.. ವಿದೇಶಿ ಯುವಕ, ಹದಿ ವಯಸ್ಸು... :)

ಅಷ್ಟೇ.. ಇನ್ನು ಯಾರನ್ನ ನೋಡಿದರು ಏನೋ ಪ್ರಯೋಜನ ಇಲ್ಲ... ಇದೆ ರೀತಿ ಆದರೂ ಆಗಬಹುದು ಅಂತ ಹೋಗೋ ಬರೋ ಜನರನ್ನ ನೋಡ್ತಾ ಕೂತ್ಕೊಂಡೆ...

ಆಗ ತಾನೆ ಬಂದ ಒಂದು ಜೋಡಿ ಅಲ್ಲೇ ಖಾಲಿ ಇದ್ದ ಸೀಟ್ ಅಲ್ಲಿ ಕೂತರು... ಆತ ಲ್ಯಾಪ್ಟಾಪ್ ತೆಗೆದ (ಆಮೇಲೆ ಬೆಳಕಿಗೆ ಬಂದದ್ದು... :P ಲ್ಯಾಪ್ಟಾಪ್ ಅಲ್ಲಿ ಫಿಲಂ ನೋಡ್ತಾ ಇದ್ದ..) , ಆಕೆ ಆತನ ಭುಜದ ಮೇಲೆ ತಲೆ ಇಟ್ಟು ಮಲಗಿದಳು...

ವಯಸ್ಸಾದ ವೃದ್ಧೆಯನ್ನು ವ್ಹೀಲ್ ಚೇರ್ ಅಲ್ಲಿ ಏರ್ಪೋರ್ಟ್ ನ ಸಪೋರ್ಟ್ ಸ್ಟಾಫ್ ಒಬ್ರು ತಳ್ಕೊಂಡು ಅರ್ರೈವಲ್ ಗೇಟ್ ಇಂದ ಹೊರಗೆ ಬರ್ತಾ ಇದ್ದಂತೆ, ಇಲ್ಲೇ ಕೂತಿದ್ದ ಒಂದು ಗುಂಪು ಓಡಿ ಹೋಗಿ ಅವರನ್ನು ಬರಮಾಡಿಕೊಂಡರು...

ದೂರದೂರಿಗೆ ಕೆಲಸಕ್ಕೆ ಅಂತ ಹೋಗಿದ್ದ ಅಪ್ಪ, ವಾಪಾಸ್ ಬಂದಾಗ ಅವನ ಆಶೀರ್ವಾದ ಪಡೆದು ಅಪ್ಪಿಕೊಂಡ 6-7 ವರ್ಷದ ಆತನ ಮಗ... ಅಪ್ಪುಗೆಯ ಸವಿ ಕಂಡ ತಂದೆ, ಆತನ ಹಣೆಗೆ ಮುತ್ತಿಟ್ಟು, ತನ್ನ ಕುಟುಂಬದ ಜೊತೆ ಹೊರಗೆ ಬಂದರು....

ಸಮಯ 4 ಘಂಟೆ ಆಗುತ್ತಾ ಬಂತು, ಗೆಳೆಯ ಇನ್ನೇನು ಬರ್ತಾನೆ ಅಂತ ಅನ್ಕೊಂಡು ಕೂತಿದ್ದ ಜಾಗದಿಂದ ಎದ್ದು ಹೋಗಿ ಗೇಟ್ ಎದುರು ನಿಂತೆ.

ಗೇಟ್ ನಂಬರ್ 14 ಮೂಲಕ ಹೊರಗೆ ಬಂದ ಒಬ್ಬ VIPಯನ್ನ ಕರೆದುಕೊಂಡು ಹೋಗೋಕೆ ಬಂದಿದ್ದ ಅವರ ಅಂಗರಕ್ಷಕರು... ಅವರನ್ನು ಕ್ಷೇಮವಾಗಿ ಅಲ್ಲೇ ಹೊರಗೆ ಕಾಯ್ತಿದ್ದ ಕಾರೊಳಗೆ ಕೂರಿಸಿದರು.

ಓದೋದಕ್ಕೆ ವಿದೇಶಕ್ಕೆ ಹೋಗಿದ್ದ ಮಗಳು ವಾಪಾಸ್ ಬಂದಾಗ ತಂದೆಯ ಪ್ರೀತಿಯ ಸ್ವಾಗತ...

ವಯಸ್ಸಾದ ಕಾಲದಲ್ಲಿ ವಿದೇಶ ಪ್ರವಾಸ ಮುಗಿಸಿಬಂದ ಇಳಿವಯಸ್ಸಿನ ಕುಟುಂಬ...

ಅಮ್ಮನ ಆಗಮನಕ್ಕಾಗಿ ಕಾದಿದ್ದ ಕಂದಮ್ಮನ ಅಳು/ನಗುವಿನ ಸ್ವಾಗತ...

ಇವುಗಳ ನಡುವೆ ಬೀಸೋ ಗಾಳಿಯ ನಡುವೆ ಸುಗಂಧ ಹೂವಿನ ಪರಿಮಳ ಬಂದಂತೆ ಬರ್ತಿದ್ದ ಗಗನಸಖಿಯರ ಹಿಂಡು... :)

ಇದ್ದ ಎರಡೂವರೆ ಘಂಟೆಯಲ್ಲಿ... ಇಷ್ಟೊಂದು ವಿವಿಧತೆ... ಎಷ್ಟೋ ಜಾತಿ-ಮತ-ಕುಲಕ್ಕೆ ಸೇರಿದ ಜನ, ಆಯಸ್ಸು-ವಯಸ್ಸಿನ ಅಂತರದ ಭೇದವೇ ಇಲ್ಲ, ಅಂತಸ್ತು-ಐಶ್ವರ್ಯದ ಯಾವುದೇ ತಡೆಗೋಡೆಗಳೇ ಇಲ್ಲ, ವರ್ಣ ಬೇಧ ಮೊದಲೇ ಇಲ್ಲ... ಕೊನೆಗೆ ನೋಡಿದ್ರೆ ಲಿಂಗ ಭೇದ ಕೂಡ ಇಲ್ಲ... :P

ಆ ಎರಡೂವರೆ ಘಂಟೆಯ ಅವಧಿಯಲ್ಲಿ ಇಡೀ ವಿಶ್ವವನ್ನೇ ಒಂದು ಸುತ್ತು ಸುತ್ತಿಬಂದ ಅನುಭವ... ದೇಶ-ಭಾಷೆ-ಕುಲ-ಮತ-ಅಂತಸ್ತು-ಪ್ರತಿಷ್ಠೆ-ಇತ್ಯಾದಿಗಳ ಎಲ್ಲೆ ಮೀರಿ ಎಲ್ಲರೂ ತಮ್ಮ ನೆಲೆ/ಗುರಿಯ ಕಡೆಗೆ ನಡೀತಾ ಇದ್ರೆ ನಮಗೆ ಯಾವ ನಾಯಕನ ಹಂಗೂ ಬೇಕಿಲ್ಲ...

ಇಷ್ಟೆಲ್ಲಾ ನೋಡಿದ್ಮೇಲೆ ಕೊನೆಗೆ ಏನ್ ಹೇಳ್ಬೇಕು ಅನಿಸ್ತಿದೆ ಅಂದ್ರೆ...
"ಮೊದಲು ಮಾನವನಾಗು..."

3 comments:

  1. enjoyed reading, keep writing brother, manavaru kaithaiddare..

    ReplyDelete
  2. Very Nice Chandra.. Didnt know you write so well anta.. Keep writing..

    ReplyDelete