Custom Search

Monday, September 24, 2012

8.15AM to 9.24PM ....

ಏನಪ್ಪಾ ಇದು ಟೈಟಲ್ ಹಿಂಗಿದೆ ಅಂತ ತಲೆ ಕೆಡಿಸ್ಕೋಬೇಡಿ, ಅದರ ಅರ್ಥ ಇಷ್ಟೇ. ಬೆಳ್ಗೆ 8.15 ರಿಂದ ರಾತ್ರಿ 9.24 ವರೆಗೆ, ಅಂದ್ರೆ ಬೆಳಿಗ್ಗೆಯಿಂದ ರಾತ್ರಿವರೆಗೂ ಬೀದಿ ಸುತ್ತಿದರ ಬಗ್ಗೆ ಈ ಆರ್ಟಿಕಲ್ ಅಂತ....

ಬೆಂಗಳೂರಿಂದ ಕೇವಲ 130-140 ಕಿ.ಮೀ. ಅಷ್ಟೇ, ನಾನು ಬೈಕ್ ಅಲ್ಲಿ ಹೋಗೋಣ ಅಂತ ಅಂದ್ಕೊಂಡಿದ್ದೆ. ಆದ್ರೆ ಮನೇಲಿ ಬಿಡ್ಬೇಕಲ್ವ, ನನ್ನ ಕೆಲವು ಗೆಳಯರು ಕೂಡ ಬೇಡ ಅಂತ ಹೇಳಿದ್ರು. ಹಾಗಾಗಿ ಬೈಕ್ ಪ್ಲಾನ್ ಬಿಟ್ಟು ಬಸ್ಸಲ್ಲಿ ಹೋಗೋದು ಅಂತ ರೆಡಿ ಆಗಿದ್ದೆ. ಮನೆಯಲ್ಲಿ ಅಮ್ಮ ಅರೆಮನಸ್ಸಿನಿಂದ ಹೋಗು ಅಂತಿದ್ರು. ನಾನು ಒಬ್ನೇ ಹೋಗೋದು ಅವ್ರಿಗೆ ಇಷ್ಟ ಇರ್ಲಿಲ್ಲ, ಗೆಳೆಯರ ಜೊತೆ ಹೋದ್ರೆ ಚೆನ್ನಾಗಿರುತ್ತೆ ಅಂತ ಹೇಳ್ತಿದ್ರು (ಮಂಡ್ಯದ ಕಡೆ ಕಾವೇರಿ ಗಲಾಟೆ ಅನ್ನೋದು ಬೇರೆ ಅವರ ತಲೇಲಿ ಇತ್ತು...) ... ಆದ್ರೆ ಏನ್ ಮಾಡೋಣ ಗೆಳಯ/ಗೆಳತಿಯರೆಲ್ಲ ಬ್ಯುಸಿ.... ಅದ್ಕೆ ನನ್ನ ಪಾಡಿಗೆ ನಾನು ಹೋಗಿ ಬರೋದು ಅಂತ ನಿರ್ಧಾರ ಮಾಡ್ಕೊಂಡು ಹೋಗಿ ಬರ್ತೀನಿ ಅಂತ ಹೇಳಿ ಹೊರಟೆ.

ಶನಿವಾರ 22-sept-2012 ಬೆಳಿಗ್ಗೆ 8.15 ರ ಸುಮಾರಿಗೆ ಮನೆ ಇಂದ ಹೊರಟ ನಾನು, ಐದು-ಹತ್ತು ನಿಮಿಷದಲ್ಲಿ ಶ್ರೀನಗರ ಬಸ್ಸ್ಟ್ಯಾಂಡ್ ಸೇರ್ಬಿಟ್ಟೆ. ಅಲ್ಲಿ ನೋಡಿದ್ರೆ, ಮೇಲುಕೋಟೆ ಗೆ ಹೋಗುವ ಬಸ್... ಆಹಾ.. ಖುಷಿ.. ಮಂಡ್ಯ ಗೆ ಹೋಗಿ ಹೋಗ್ಬೇಕು ಅಂದ್ಕೊಂಡಿದ್ದೆ, ನಾಗಮಂಗಲಗೆ ಹೋಗಿ ಹೋಗ್ಬೇಕು ಅಂದ್ಕೊಂಡಿದ್ದೆ, ಆದ್ರೆ ಅಲ್ಲಿ ನೋಡಿದ್ರೆ ಡೈರೆಕ್ಟ್ ಬಸ್... ಹತ್ಕೊಂಡು ಕೂತ್ಕೊಂದ್ಬಿಟ್ಟೆ. ಐದು ನಿಮಿಷ ಅದ್ಮೇಲೆ.. ಮತ್ತೊಂದು ಬಸ್ ಬಂತು, ನಾನು ಕೂತಿದ್ದ ಬಸ್ ನ ಕ್ಲೀನರ್ ಬಂದು, ಈ ಬಸ್ ಇನ್ನೂ ಲೇಟ್... ಆ ಬಸ್ ಅಲ್ಲಿ ಹೋಗಿ ಅಂತ ಹೇಳ್ದ. ಅದು ಕೂಡ ಪ್ರೈವೇಟ್ ಬಸ್, KSRTC ಕಡೆಯಿಂದ ಜಾಸ್ತಿ ಬಸ್ ಇಲ್ಲ, ಇದರ ಉಪಯೋಗ ಪಡೆದುಕೊಳ್ಳುವ ಪ್ರೈವೇಟ್ ಟ್ರಾನ್ಸ್ಪೋರ್ಟ್ ನವರು, ಒಂದಷ್ಟು ಬಸ್ ಹಾಕಿದ್ದಾರೆ. ಸರಿ ಇಷ್ಟೆಲ್ಲಾ ಆಯ್ತು, ಆ ಬಸ್ ಹತ್ತಿ ಕೂತ್ಕೊಂಡೆ, ಎರಡು ಸೀಟ್ ಇರೋ ಕಡೆ ಸಿಂಗಲ್ ಆಗಿ ಕಿಟಕಿ ಸೀಟ್ ಅಲ್ಲಿ ಕೂತ್ಕೊಂಡೆ. ಸುಮಾರು 8.45 ಹೊತ್ಗೆ ಬಸ್ ಹೊರಡೋಕೆ ಶುರು ಆಯ್ತು. ಒಬ್ನೇ ಕೂತ್ಕೊಂಡು ಏನ್ ಮಾಡ್ಲಿ, ಸ್ವಲ್ಪ ದೂರ ಹೋಗೋ ಹೊತ್ಗೆ ನಿದ್ದೆಗೆ ಶರಣಾದೆ. ನಿದ್ದೇಲಿ ನನ್ ಪಕ್ಕ ಯಾವ್ದೋ ಸೂಪರ್ ಫಿಗುರ್ ಬಂದ ಹಾಗೆ ಕನಸು ಕಾಣ್ತಾ, ಯಾವ್ದೋ ಲೋಕಕ್ಕೆ ಹೋಗ್ಬಿಟ್ಟೆ.

ಕಣ್ಣು ಬಿಟ್ರೇ, ಆಹಾ, ಎಂಥ ಖುಷಿ. ಏನೋ ಸಂಭ್ರಮ. ಐದು ನಿಮ್ಷ ಆಯ್ತು, ಹತ್ತು ನಿಮ್ಷ ಆಯ್ತು.. ಎಷ್ಟು ಹೊತ್ತು ಕಿಟಕಿ ಕಡೆ ನೋಡಲಿ. ಈಗ ಬೇರೆ ಸಹವಾಸ ದೋಷ, ಸುಮ್ನೆ ಕೂರೋಕೆ ಕಷ್ಟ, ಏನಾದ್ರು ಮಾತಾಡ್ಬೇಕು. ಸರಿ ಮಾತು ಶುರು ಮಾಡೋಣ ಅಂತ ನಿರ್ಧಾರ ಮಾಡಿ, ಕೇಳೆ ಬಿಟ್ಟೆ

ಅಜ್ಜಿ, ಯಾವೂರು ನಿಮ್ದು?

ಅಯ್ಯೋ!!! ನನ್ನದಾ ಮಗ, ನಾಗಮಂಗಲ. ಅದೇ ನಾಗಮಂಗಲದಲ್ಲಿ TB ಐತೆ ಅಲ್ವಾ? ಅಲ್ಲೇ ನಮ್ಮನೆ. ನಾಲ್ಕೆಜ್ಜೆ ಅಲ್ಲಿಂದ. ಅಲ್ಲಿ TB ಹತ್ರ ಇಳ್ಕೊಂಡು ಹಂಗೆ ಸೀದಾ ಟೌನ್ ಕಡೆ ನಡ್ಕೊಂಡು ಹೋದ್ರೆ, ನಾಲ್ಕೆಜ್ಜೆ, ಹತ್ತೋ-ಹನ್ನೊಂದನೇ ಮನೆ, ಎರಡು ಗಲ್ಲಿ ದಾಟಿದ್ಮೇಲೆ.
(ಅಲ್ಲಿಗೆ ನಿಲ್ಲಿಸಿ ನಾನು ಮಾತು ಮುಂದುವರೆಸ್ದೆ)

ಒಹ್!!! ಎರಡೇ ಗಲ್ಲಿ ಅದ್ಮೇಲೆ ಹತ್ತೋ-ಹನ್ನೊಂದನೇ ಮನೆ, ನಾಲ್ಕೆಜ್ಜೆ. ಜಾಸ್ತಿ ಹತ್ರ ಆಯ್ತು ಬಿಡಿ. ಮತ್ತೆ ಇಲ್ಲಿ ಬಂದಿದ್ದು?

ಅಯ್ಯೋ, ಅದಾ ಏನ್ ಹೇಳ್ಲಿ ಮಗ, ನನ್ ಮಗಳನ್ನ ಇಲ್ಲೇ ಬೆಂಗಳೂರಿಗೆ ಕೊಟ್ಟಿದ್ದೀವಿ, ಹಬ್ಬಕ್ಕೆ ಅಂತ ಬಂದಿದ್ದೆ. ಏನ್ ಜೋರು ಮಾಡಿದ್ರು ಅಂತೀಯ ಹಬ್ಬಾನ, ಆ ಮೊಮ್ಮಕ್ಳಂತೂ ಏನ್ ಚೂಟಿ ಗೊತ್ತಾ. ನಿಂತ ಕಡೆ ನಿಲ್ಲೋದಿಲ್ಲ, ಕೂಟ ಕಡೆ ಕೂರೋದಿಲ್ಲ... ಇನ್ನೂ ಐದು ವರ್ಷ ಇಲ್ಲ ಅವಕ್ಕೆ ಎಷ್ಟು ಮಾತಾಡ್ತಾವೆ ಅಂದ್ರೆ ಕೇಳೋಕೆ ಎರಡು ಕಿವಿ ಸಾಲ್ದು.....

ಸರಿ... ಸರಿ.. ಈ ಬಸ್ಸು ನಾಗಮಂಗಲಕ್ಕೆ ಎಷ್ಟು ಹೊತ್ಗೆ ಹೋಗುತ್ತೆ ಅಜ್ಜಿ...

ಅಯ್ಯೋ... ಒಂದು 11.45-12.00 ಟೈಮ್ ಗೆ ಹೋಗುತ್ತೆ ಮಗ. ಈ ___________ ಮಗ, ಅಲ್ಲಲ್ಲಿ ನಿಲ್ಲಿಸ್ಕೊಂಡು, ಹೋಗೋ-ಬರೋರ್ನೆಲ್ಲ ಹತ್ತಿಸ್ಕೊಂಡು ಅಲ್ಲಿಗೆ ಹೋಗೋ ಹೊತ್ಗೆ ನನ್ ಜೀವ ಹೋಗ್ಬಿಡುತ್ತೆ. ಇವ್ನಿಂಗೆ ಏನ್ ಬಂದೈತೆ ದೊಡ್ರೋಗ, ಸೀದಾ ಹೋಗೋಕೆ ಆಗೋಲ್ವಾ???? ಅಲ್ಲಲ್ಲಿ ನಿಲ್ಲಿಸ್ಕೊಂಡು ಹೋದ್ರೆನೆ ಈ ______________ ಮಕ್ಳಿಗೆ ತಿಂದದ್ದು ಜೀರ್ಣ ಆಗೋದು........

ಅಜ್ಜಿ, ಊರಲ್ಲಿ ಒಬ್ರೇನಾ?

ಅಯ್ಯೋ... ಒಬ್ಳೆ ಎಲ್ಲಿ ಇರೋಕೆ ಆಗುತ್ತೆ. ಒಬ್ಳೆ ಇರೋಕೆ ಬಿಟ್ಟಾರ ಊರ ಜನ. ಅವ್ನೆ ನನ್ ಗಂಡ. ಕೈಗೆ ಎರಡು ಕೊಟ್ಟು ಆಮೇಲೆ ಕೈಲಾಗ್ದಂಗೆ ಮನೆಗೆ ಬಿದ್ದವ್ನೆ, ಅವ್ನಿಗೂ ನಾನೇ ತಂದು ಹಾಕ್ಬೇಕು.....


ಹೀಗೆ ಹೋಯ್ತು ನಮ್ಮ ಮಾತುಕತೆ... ನಾಗಮಂಗಲ ಬಂದೇ ಬಿಡ್ತು... ಅಜ್ಜಿಗೆ ಟಾಟಾ ಹೇಳಿ ಕಳಿಸ್ದೆ. ನಾಗಮಂಗಲ ಸೇರೋಹೊಟ್ಗೆ ಟೈಮು 12.00 ಆಗಿತ್ತು. ಅಲ್ಲಿ ಒಂದು ಹದಿನೈದು ನಿಮ್ಷ ಟೀ ಬ್ರೇಕ್ ಬೇರೆ. ಆಯ್ತು.. ಡ್ರೈವರ್, ಕಂಡಕ್ಟರ್, ಕ್ಲೀನರ್ ಎಲ್ಲ ಹೋಗಿ ಟೀ ಕುಡ್ಕೊಂಡು ಬಂದ್ರು. ಬಸ್ ಮತ್ತೆ ಹೊರಟಾಗ 12.20. ಮತ್ತೆ ವಿಶೇಷ ಏನು ಇಲ್ಲ, ಮೇಲುಕೋಟೆ ರೀಚ್ ಅದಾಗ 12.50 ಆಗಿತ್ತು. ಅಮ್ಮಂಗೆ ಒಂದು ಕಾಲ್ ಮಾಡಿ, ಅಲ್ಲೇ ಇದ್ದ ಜನರನ್ನ ಕೇಳ್ತಾ ಯೋಗಾನರಸಿಂಹ ದೇವಸ್ಥಾನದ ಕಡೆ ಹೊರಟೆ.

ಸಾಮಾನ್ಯವಾಗಿ ದೇವರಿಗೆ ಕಾಯಿ-ಹಣ್ಣು ಕೊಟ್ಟು ಪೂಜೆ ಮಾಡ್ಸೋದು, ತಟ್ಟೆಗೆ ಕಾಸು ಹಾಕೋದು ನಂಗೆ ಇಷ್ಟ ಆಗೋಲ್ಲ. ಆದ್ರೆ ಯಾಕೋ ಗೊತ್ತಿಲ್ಲ, ಬಹುಷಃ ಅಮ್ಮ ಬೈತಾರೆ ಅಂತಾ ಅಂದ್ಕೊಂಡು, ಕಾಯಿ-ಹಣ್ಣು ತಗೊಂದ್ಬಿಟ್ಟೆ. ಅದಕ್ಕೆ 30 ರೂಪಾಯಿ (ಒಂದೇ ತೆಂಗಿನ ಕಾಯಿ, ನಾಲ್ಕೈದು ಬಾಳೆಹಣ್ಣು, ನಾಲ್ಕು ಕಡ್ಡಿ, ಎರಡು ಕರ್ಪೂರ ಮತ್ತೆ ಅರಿಶಿನ-ಕುಂಕುಮ). ಚಪ್ಪಲಿ ಅಲ್ಲೇ ಬಿಟ್ಟು, ಯೋಗಾನರಸಿಂಹ ದೇವಸ್ಥಾನದ ಕಡೆಗೆ ನನ್ನ ಹೆಜ್ಜೆ. ಮೆಟ್ಟಿಲುಗಳು ಅಷ್ಟೇನೂ ಜಾಸ್ತಿ ಇಲ್ಲ, ಟ್ರೆಕ್ಕಿಂಗ್, ಟ್ರಿಪ್ ಬೇಜಾನ್ ಹೋಗಿದ್ದ ನಂಗೆ ಅದೇನು ಅಷ್ಟು ಕಷ್ಟ ಅನಿಸ್ಲಿಲ್ಲ. ಟ್ರೆಕ್ಕಿಂಗ್ ಹೋಗಿ ತುಂಬಾ ದಿನ ಆಗಿದ್ರಿಂದ, ಮೇಲೆ ಸುಡು ಬಿಸಿಲು ಬೇರೆ, ಆಗಾಗ ಸ್ವಲ್ಪ ಸುಸ್ತು ಅನಿಸ್ತಿತ್ತು. ವಯಸ್ಸು ನೋಡಿ, ಹೇಳಿದ ಮಾತು ಕೇಳೋದಿಲ್ಲ, ಒಂದೇ ಉಸಿರಲ್ಲಿ ಹತ್ತೇಬಿಟ್ಟೆ. ದೇವಸ್ಥಾನದ  ಒಳಗೆ ಕೂಡ ಹೋಗ್ಬಿಟ್ಟೆ.

ಒಂದೇ ಕ್ಷಣ, ಒಂದೇ ಸೆಕೆಂಡ್ ಏನಾದ್ರು ಅನ್ಕೊಳ್ಳಿ....
ಆಕಾಶ ತಲೆಮೇಲೆ ಬಿದ್ದಂಗೆ ಆಯ್ತು, ಉಸಿರು ಕಂಟ್ರೋಲ್ ಮಾಡೋಕೆ ಆಗ್ತಿಲ್ಲ, ಹೃದಯ ಬಡ್ಕೋತಾ ಇದೆ. ಆ ಒಂದು ಕ್ಷಣ ತಲೇಲಿ ಸಾವಿರ ಯೋಚನೆಗಳು....

ಆಹಾ!! ಎಂಥ ಖುಷಿ, ದೇವಸ್ಥಾನದಲ್ಲಿ ಜೀವ ಹೋದ್ರೆ.. ಅದಕ್ಕಿಂತ ಪುಣ್ಯ ಮತ್ತೇನಿದೆ. ಯಾವುದೇ ತಂಟೆ ಇಲ್ಲ, ಸುತ್ತ ಅಳೋರು ಯಾರು ಇಲ್ಲ. ಯಾರ್ಗೂ ನೋವು ಮಾಡ್ತಿಲ್ಲ. ಕಷ್ಟನೇ ಪಡದೆ ಜೀವ ಹೋಗ್ಬಿಡ್ತಿದೆ........

ಅಯ್ಯೋ ಇಲ್ಲೇ ನಾನು ಸತ್ತು  ಹೋದ್ರೆ, ಮನೆಗೆ ಯಾರು ಹೇಳೋರು, ಅಮ್ಮ ಎಷ್ಟು ನಂಬಿಕೆ ಇಟ್ಕೊಂಡು  ನನ್ನ ಕಳ್ಸಿದ್ದಾರೆ. ಅವ್ರಿಗೆ ಹುಷಾರಾಗಿ ಹೋಗಿ ಬರ್ತೀನಿ ಅಂತಾ ಹೇಳಿದ್ದೀನಿ, ಈಗ ವಾಪಾಸ್ ಬರೋದಿಲ್ಲ ಅಂತಾ ಗೊತ್ತಾದ್ರೆ???? ಅವ್ರಿಗೆ ಈ ವಿಷ್ಯ ತಿಲಿಸೋರು ಯಾರು??? ಈ ವಿಷ್ಯ ಕೇಳಿ ಅವರ ಸ್ಥಿತಿ ಏನಾಗುತ್ತೆ???  .........
(ಊರಿಂದ ಊರಿಗೆ ಹೋಗಬೇಕಿದ್ರೆ ದಯವಿಟ್ಟು ಮತ್ತೊಬ್ರು ಜೊತೆ ಇದ್ರೆ ಒಳ್ಳೇದು ಅನ್ಸುತ್ತೆ)

ಬಿಡಿ, ಹೊರಗೆ ಬಂದು, ಕೂತ್ಕೊಂಡು ನಾನು ಯಾವಾಗ್ಲು ಮಾಡೋ ಹಾಗೆ, ಉಸಿರು ಕಂಟ್ರೋಲ್ (ಪ್ರಾಣಾಯಾಮ) ಮಾಡೋಕೆ ಶುರು ಮಾಡ್ಕೊಂಡೆ. ಎರಡು ಮೂರು ನಿಮಿಷ ಕೂತ್ಕೊಂಡು ಪ್ರಾಣಾಯಾಮ ಮಾಡಿದ್ಮೇಲೆ ನನ್ನ ಪೂರ್ತಿ ದೇಹ ಕಂಟ್ರೋಲ್ ಗೆ ಬಂತು.

ಆಮೇಲೆ ಎದ್ದು, ಮತ್ತೆ ದೇವಸ್ಥಾನದ ಒಳಗೆ ಹೋಗಿ, ಕಾಯಿ-ಹಣ್ಣು ಕೊಟ್ರೆ, ಹೊಡೆದ ಕಾಯಿಂದ ಒಂದೇ ಚಿಪ್ಪು ಮಾತ್ರ ವಾಪಾಸ್ ಬಂತು. ಒಂದು ಅಲ್ಲೇ ಮಾಯಾ.... ತಟ್ಟೆಗೆ ಕಾಸು ಹಾಕೋಣ ಅಂದ್ಕೊಂಡಿದ್ದೆ, ವಾಪಾಸ್ ಒಳಗೆ ಹಾಕ್ಕೊಂಡೆ, ತಟ್ಟೆಗೆ ಹಾಕಲಿಲ್ಲ. ಪೂಜೆ ಆಯ್ತು, ದೇವಸ್ಥಾನದ ಹೊರಗೆ ನಿಂತ್ಕೊಂಡು ಹಂಗೆ ಒಂದು ವ್ಯೂ ನೋಡಿ, ಒಂದಷ್ಟು ಫೋಟೋಸ್ ಕ್ಲಿಕ್ ಮಾಡ್ಕೊಂಡು, ವಾಪಸ್ ಕೆಳಗೆ ಇಳ್ಯೋಕೆ ಶುರು. ಇಳಿಬೇಕಿದ್ರೆ, ಒಬ್ಬ ಹುಡುಗ ಬಂದ, ಅಣ್ಣ, ನನ್ನ ನಿನ್ನ ತಮ್ಮ ಅನ್ಕೋ, ಒಂದು ರುಪಾಯಿ ಕೊಡು, ಬುಕ್ ತಗೋಬೇಕು ಅಂದ. ಕೊಡೋದಿಲ್ಲ ಅಂತಾ ಹೇಳಿ ಕಳಿಸ್ದೆ. ಸ್ವಲ್ಪ ಕೆಳಗೆ ಹೋಗ್ತಿದ್ದಂಗೆ ಹೊಟ್ಟೆ ಜ್ಞಾಪಕ ಬಂತು. ಅಮ್ಮ ಕೊಟ್ಟಿದ್ದ ಉಪ್ಪಿಟ್ಟು ಬಾಕ್ಸ್ ತೆಗೆದು ತಿನ್ನೋಕೆ ಶುರು ಮಾಡ್ಕೊಂಡೆ, ಮುಗಿದ್ಮೇಲೆ ಇನ್ನೂ ಹಸಿವು ಅನಿಸ್ತು. ಅಲ್ಲೇ ಒಬ್ಬ ಪುಳಿಯೋಗರೆ ಮಾರ್ಕೊಂಡು ಕೂತಿದ್ದ. ಹತ್ತು ರೂಪಾಯಿ ಕೊಟ್ಟು ಪುಳಿಯೋಗರೆ ತಗೊಂಡು ತಿಂದಮೇಲೆ ಸ್ವಲ್ಪ ಸಮಾಧಾನ. ಆಮೇಲೆ ಒಂದು ಎಳೆನೀರು ಕುಡಿದು, ಇನ್ನೊಂದಷ್ಟು ಫೋಟೋಸ್ ಕ್ಲಿಕ್ ಮಾಡಿ ಮುಂದೆ ಹೋದೆ. ಕೆಳಗೆ ಹೋಗ್ತಿದ್ದಂಗೆ ಮತ್ತೆ ಅದೇ ರೀತಿ, ಒಬ್ಬ ಬಂದ,

ಅಣ್ಣ ಕಾಯಿ ಕೊಡು.

ಯಾಕೋ ಕಾಸು ಬೇಡ್ವ??

ಇಲ್ಲ ಅಣ್ಣ ಸಾಂಬಾರ್ ಮಾಡೋಕೆ ಕಾಯಿ ಬೇಕು, ಕಾಸು ಬೇಡ...

ಸರಿ ತಗೋ ಅಂತಾ ಇದ್ದ ಒಂದೇ ಚಿಪ್ಪು ತೆಂಗಿನಕಾಯಿ ಕೊಟ್ಬಿಟ್ಟೆ. ಸುತ್ತ ಎರಡು-ಮೂರು ಮಕ್ಳು ಬಂದು ನಂಗೆ-ನಂಗೆ ಅಂತಿದ್ರು. ಬಾಳೆಹಣ್ಣು ಅಷ್ಟೇ ಇರೋದು ಅಂತಾ ಹೇಳಿ, ಅದನ್ನು ಕೊಟ್ಟು, ನಾನು ತಿಂದು ಮುಂದೆ ಹೋದೆ. ಹೋಗ್ತಾ ದಾರೀಲಿ ಕೂತಿದ್ದ ವಯಸ್ಸಾದವರನ್ನ ನೋಡಿ ಯಾಕೋ ಒಂಥರಾ ಅನಿಸ್ತು, ಇದ್ದ ಐದಾರು ಮಂದಿಗೆ ಒಂದೊಂದು ರೂಪಾಯಿ ಕೊಟ್ಟು ಹೊರಗೆ ಬಂದೇ. ಆಮೇಲೆ ಅನಿಸ್ತು, ಬಹುಷಃ ಅದೇ ಕಾರಣಕ್ಕೆ ಅನ್ಸುತ್ತೆ ದೇವ್ರು ನನ್ನ ಕೈಲಿ ಕಾಯಿ-ಹಣ್ಣು ತಗೊಳ್ಳೋ ಹಾಗೆ ಮಾಡಿದ್ದು ಮತ್ತೆ ತಟ್ಟೆಗೆ ಕಾಸು ಹಾಕೋದು ಬೇಡ ಅಂತಾ ಅನ್ಸೋ ಹಾಗೆ ಮಾಡಿದ್ದು. ಒಟ್ನಲ್ಲಿ ಒಂದೆರಡು ಒಳ್ಳೆ ಕೆಲ್ಸ ಆಯ್ತು ಅಂತಾ ಮನಸ್ಸಿಗೆ ಖುಷಿ.

ಯೋಗಾನರಸಿಂಹ ದೇವರ ದರ್ಶನ ಅದ್ಮೇಲೆ, ಕಲ್ಯಾಣಿ ಕಡೆ ಹೊರಟೆ. ಅಲ್ಲಿ ಹೋಗ್ತಿದ್ದಂಗೆ ಯಾಕೋ ಅಲ್ಲಿ ಆದದ್ದೆಲ್ಲ ಯಾರ್ಗಾದ್ರು ಹೇಳ್ಬೇಕು ಅನಿಸ್ತು, ಫೋಟೋ ಕ್ಲಿಕ್ ಮಾಡ್ತಾ ಮಾಡ್ತಾ ಗೆಳತಿಗೆ ಫೋನ್ ಮಾಡ್ದೆ. ಮಾತಾಡ್ತಿದ್ದಂಗೆ ಒಂದು ಆಘಾತದ ವಿಷ್ಯ... ನಮ್ಮ ಕಂಪನಿ ಅಲ್ಲಿ ಕೆಲ್ಸ ಮಾಡ್ತಿದ್ದ ಸಹೋದ್ಯೋಗಿ ಒಬ್ರು ಸತ್ತು ಹೋದ್ರು!!!!!!!! ಅವ್ರಿಗೆ ಅಷ್ಟು ವಯಸ್ಸು ಏನು ಆಗಿರ್ಲಿಲ್ಲ. ಕಾರಣ ಕೇಳಿದ್ರೆ, ವೈದ್ಯರ ನಿರ್ಲಕ್ಷ್ಯ (be careful with doctors and hospitals). ಅದನ್ನು ಕೇಳಿ ನಂಗೆ ಏನು ಹೇಳ್ಬೇಕು ಅನಿಸ್ಲಿಲ್ಲ. ಸುಮ್ನೆ ಹಂಗೆ ಮಾತಾಡಿ ಫೋನ್ ಕಟ್ ಮಾಡಿದ್ದು ಆಯ್ತು.

ಕಲ್ಯಾಣಿಯ ಹತ್ರ ಫೋಟೋಸ್ ಅದ್ಮೇಲೆ, ಚೆಲುವ ನಾರಾಯಣನ ದರ್ಶನಕ್ಕೆ ನನ್ನ ಹೆಜ್ಜೆಗಳು. ಸುಮಾರು 3.30-4.00 ಗೆ ಬಾಗಿಲು ತೆಗ್ಯೋದು  ಅಂತಾ ಹೇಳ್ತಿದ್ರು, ಆಗ ಸಮಯ 2 - 2.30 ಆಗಿತ್ತು. ಹಾಗೆ ಸಿಕ್ಕಿದ ಜನರನ್ನ ಕೇಳ್ತಾ ಕೇಳ್ತಾ ಹೊರಟೆ. ಕವಿ ಪು. ತಿ. ನರಸಿಂಹಾಚಾರ್ ಅವರ ಮನೆ, ಅಕ್ಕ-ತಂಗಿ ಕೊಳ, ರಾಜಗೋಪುರ ಇವೆಲ್ಲ ನೋಡ್ಕೊಂಡು ಬಾರೋ ಹೊತ್ಗೆ 3.45 ಆಯ್ತು. ಬಾಗಿಲು ತೆಗೆದಿತ್ತು, ಚೆಲುವ ನಾರಾಯಣನ ಚೆಲುವನ್ನು ಕಣ್ತುಂಬ ನೋಡಿ ಬಸ್-ಸ್ಟ್ಯಾಂಡ್ ಗೆ ಹೊರಟೆ.

ನಾಲ್ಕು ಘಂಟೆಗೆ ಅಂತಾ ಇದ್ದ ಬಸ್, ನಾಲ್ಕು ಐದಕ್ಕೆ ಬಂತು. ಮಂಡ್ಯಕ್ಕೆ ಹೋಗೋ ಬಸ್ ಅದು, ಹತ್ಕೊಂಡು ಕೂತ್ಕೊಂಡೆ. ಕಾಲು ಘಂಟೆ ಅದ್ಮೇಲೆ 4.25 ಕ್ಕೆ ಬಸ್ ಅಲ್ಲಿಂದ ಹೊರಡ್ತು. ಒಬ್ಬ ಅಂಕಲ್ ಬಂದು ಕೂತ್ಕೊಂಡ್ರು...

ಅಣ್ಣ, ಯಾವೂರು?

ರಾಮನಗರ, ಮಂಡ್ಯಕ್ಕೆ ಹೋಗಿ ಹೋಗ್ತೀನಿ. (ಬಸ್ ಕೊನೆ ಸ್ಟಾಪ್ ಇರೋದೇ ಮಂಡ್ಯ, ರಾಮನಗರಕ್ಕೆ ಹೋಗು ಅಂದ್ರೆ ಹೋಗುತ್ತಾ?... )

ನಾನು ಬೆಂಗಳೂರಿಗೆ ಹೋಗ್ಬೇಕು, ಮಂಡ್ಯನೆ ಕೊನೆ ಸ್ಟಾಪ್... ;)

ಅಂತಾ ಹೇಳಿ ಸುಮ್ನಾದೆ.. ಅಣ್ಣ ಗರಂ ಆಗಿದ್ರು..ಹಾಗಾಗಿ ಏನು ಮಾತಿಲ್ಲ... ನಿದ್ದೆ ಕಡೆ ಮನಸ್ಸು ಜಾರಿತು... ದೇಹ ನಿದ್ದೆಗೆ ಜಾರಿತು...

ಐದು ಮೂವತ್ತೈದಕ್ಕೆ ಮಂಡ್ಯದಲ್ಲಿ ಇಲ್ಕೊಂಡು ನೋಡಿದ್ರೆ, ಬೆಂಗಳೂರಿಗೆ ಬಸ್ ನಿಂತಿತ್ತು. ಓಡಿಹೋಗಿ ಹತ್ಕೊಂಡು ಕೂತೆ. ಅಲ್ಲಿ ಕೂಡ ಏನು ವಿಶೇಷ ಇಲ್ಲ, ನಿದ್ದೆ ಅಷ್ಟೇ. ಮತ್ತೆ ಕಣ್ಣು ಬಿಟ್ಟಾಗ ಕೆಂಗೇರಿ. ಸುಮಾರು 8 ಘಂಟೆಗೆ ನಾಯಂಡಹಳ್ಳಿ ಸಿಗ್ನಲ್ ಕ್ರಾಸ್ ಮಾಡಿದ್ದು ಆಯ್ತು, ಆಮೇಲೆ ತಗ್ಲಾಕ್ಕೊಂಡೆ ಕಣ್ರೀ, ಒಬ್ಬ ಗೆಳೆಯನ ಕರೆ... ಆಯ್ತು ಒಂದು 20 ನಿಮಿಷ... ಅದೇ ಸಮಯದಲ್ಲಿ ಇನ್ನೊಬ್ಬ ಗೆಳಯನಿಗೆ ಫೋನ್ ಮಾಡಬೇಕಿದ್ದು ಜ್ಞಾಪಕ ಬಂತು. ಮಾತು ನಿಂತಮೇಲೆ, ಇನ್ನೊಬ್ಬ ಗೆಳೆಯನಿಗೆ ಫೋನ್ ಮಾಡ್ದೆ. ಹತ್ತು ನಿಮಿಷ ಆಗ್ತಿದ್ದಂಗೆ, ಗೆಳತಿಯ ಕರೆ. ಮತ್ತೆ ಮಾಡ್ತೀನಿ ಅಂತಾ ಹೇಳಿ ಫೋನ್ ಕಟ್ ಮಾಡಿ, ಗೆಳತಿಗೆ ಫೋನ್ ಮಾಡ್ದೆ. ಮಾತು ಮುಗ್ಯೋ ಹೊತ್ಗೆ ಸ್ಯಾಟಲೈಟ್ ಬಸ್ ಸ್ಟ್ಯಾಂಡ್ ಬಂತು. ಟೈಮು 9 ಆಗಿತ್ತು. ಮತ್ತೆ ಮಾಡ್ತೀನಿ ಅಂತಾ ಹೇಳಿದ್ದ ಗೆಳಯನಿಗೆ ಫೋನ್ ಮಾಡಿ, ವಾಕಿಂಗ್ ಶುರು... ಮನೆ ಕಡೆಗೆ. ಆಟೋ ಹತ್ತಿದ್ರೆ 30 ರೂಪಾಯಿ ಜೊತೆಗೆ 9 ಘಂಟೆ ಆಗಿದ್ರಿಂದ ಇನ್ನೂ ಹೆಚ್ಚಿಗೆ ಕೊಡಬೇಕಿತ್ತು, ಮನೆ ಸೇರೋಕೆ ಟೈಮು 10-15 ನಿಮಿಷ. ಬಸ್ ಅಲ್ಲಿ ಹೋದ್ರೆ, ಆಶ್ರಮಕ್ಕೆ ಹೋಗಿ, ಅಲ್ಲಿಂದ ಬಸ್, ಆಟೋ ಅಥವಾ ನಡ್ಕೊಂಡು ಹೋಗ್ಬೇಕಿತ್ತು, ಇದಕ್ಕೆ ಕಡಿಮೆ ಅಂದ್ರು 30-40 ನಿಮಿಷ. ಸ್ಯಾಟಲೈಟ್ ಬಸ್ ಸ್ಟ್ಯಾಂಡ್ ಇಂದ ಮನೆ ಎರಡುವರೆ ಕಿ.ಮೀ., 9.05 ಕ್ಕೆ ಶುರು ಮಾಡ್ಕೊಂಡ ವಾಕಿಂಗ್ 9.24 ಮನೆ ಸೇರ್ಕೊಂಡೆ (ಟೈಮು 19 ನಿಮಿಷ).

ಬೆಳಿಗ್ಗೆ 8.15 ಕ್ಕೆ ಶುರು ಆದ ನನ್ನ ಪ್ರಯಾಣ ರಾತ್ರಿ 9.24 ಕ್ಕೆ ಮುಕ್ತಾಯ ಆಯ್ತು.... :)

ಹೆಚ್ಚಿನ ಮಾಹಿತಿ (Trip information)...

Bengaluru to Melkote
Direct bus Srinagar to MelKote - National Travels  (via Nelamangala, Kunigal, Yadiyur, Bellur cross, Nagamangala, Melukote)
start time morning     8.30 - 8.40
end time afternoon  12.45 - 1.00

Melkote to Bengaluru (Melkote to Mandya and Mandya to Bengaluru)
Melkote to Mandya - Mandya city bus
start time 4.10 - 4.20 PM
end time   5.30 - 5.40 PM

Mandya to Bengaluru - KSRTC
start time 5.40 - 5.45 PM
end time  8.00 - 9.00 - 10.00 PM (depending on traffic after reaching Bengaluru).

No comments:

Post a Comment