Custom Search

Sunday, August 12, 2012

ಏನ ಹೇಳಲಿ ನಾ ಅಗಲಿಕೆಯ ಆಳ...????


ಯಾರು ಊಹಿಸಿರಲಿಲ್ಲ, ಯಾರ ಅಪೇಕ್ಷೆಯೂ ಅದಾಗಿರಲಿಲ್ಲ, ಯಾರೊಬ್ಬರು ನಿರೀಕ್ಷಿಸಿರಲಿಲ್ಲ, ಎಲ್ಲವೂ ಅನಿರೀಕ್ಷಿತ, ಅನಪೇಕ್ಷಿತ, ಊಹೆಗೆ ಮೀರಿದ್ದು, ಕಲ್ಪನೆಗೆ ನಿಲುಕದ್ದು, ಆ ಅಗಲಿಕೆ ಮನಸಿನ ಆಳದಲ್ಲಿ ಬೇರೂರಿದ್ದು... ಒಂದು ವರ್ಷವೇ ಆದರೂ ಇನ್ನು ಈಗ ಕಣ್ಣು ಮುಂದೆ ನಡೆಯುತ್ತಿರುವಂತಿದೆ, ಕೆಲ ಕ್ಷಣ ಕಣ್ಣಂಚಲ್ಲಿ ಸಾಗಿ ಹೋಗುವ ಆ ಘಟನೆಯ ಅವಶೇಷ, ಕಣ್ಣಂಚಲ್ಲಿ ಹಾಗೆ ಹನಿ ಹನಿ ಕಂಬನಿ ಸುರಿಯುವಂತೆ ಮಾಡುತ್ತದೆ...

ಅಂದು ಗೆಳೆಯರ ದಿನ, ೨೦೧೧ ನೆ ವರ್ಷದ ಗೆಳೆಯರ ದಿನ (friendship day), ನಾವು ಗೆಳೆಯರೆಲ್ಲ ಭೇಟಿಯಾಗಬೇಕಿತ್ತು, ಅದು ಆಗಸ್ಟ್ ತಿಂಗಳು, ಲಾಲ್-ಭಾಗ್ ಅಲ್ಲಿ ಫಲ-ಪುಷ್ಪ ಪ್ರದರ್ಶನ, ಎಲ್ಲರು ಲಾಲ್-ಭಾಗ್ ಅಲ್ಲಿ ಭೇಟಿಯಾಗೋಣ ಅಂತ ಮೊದಲೇ ಪ್ಲಾನ್ ಆಗಿತ್ತು. ಆದರೆ ವಿಧಿಯ ಬರಹ ಬೇರೇನೆ ಇತ್ತು, ಆ ಕಾಲದ ಕೈಗೊಂಬೆಗಳು ನಾವೆಲ್ಲಾ, ಆ ದೇವರ ಆಟದಲ್ಲಿ ನಾವೆಲ್ಲರೂ ಅತಿ ಸಣ್ಣ ಆಟಿಕೆಗಳು ಅಷ್ಟೇ. ನಾನು ಮತ್ತೆ ಮತ್ತೊಬ್ಬ ಗೆಳೆಯ, ನಾಮಕರಣ ಸಮಾರಂಭದಲ್ಲಿ ಇದ್ವಿ, ಸರಿ ಸುಮಾರು ಮಧ್ಯಾಹ್ನದ ಊಟದ ಹೊತ್ತಿಗೆ, ಸೂತ್ರದಾರನ ಆಜ್ಞೆಯ ಒಬ್ಬ ಪರಿಪಾಲಕ ಮಳೆರಾಯ ತನ್ನ ಆಟ ಶುರು ಮಾಡ್ಕೊಂಡ. ಆಟಿಕೆಗಳು ನಾವು ಏನು ಮಾಡೋಕೆ ಸಾಧ್ಯ,  ಭವಿಷ್ಯದ ಎಲ್ಲ ಹುನ್ನರಾಗಳನ್ನು ತನ್ನಲ್ಲಿ ಅಡಗಿಸಿಕೊಂಡಿದ್ದ ಆ ಮಳೆಯ ಆಟದಲ್ಲಿ ನಾವು ಏನು ಮಾಡಲಾಗದ ನಿರ್ಜೀವ ಆಟಿಕೆಗಳು. ಭವಿಷ್ಯದ ಹುನ್ನಾರಿನ ರಹಸ್ಯ ತಿಳಿಯದ ನಾವು, ಅಂದಿನ ಭೇಟಿಯನ್ನು ಮುಂದೂಡಿದ್ವಿ, ಮಳೆಯ ಕಾರಣದಿಂದ ಅಂದಿನ ಭೇಟಿ ಕ್ಯಾನ್ಸಲ್ ಮಾಡಿದ್ವಿ.

ಅದೇ ದಿನ ರಾತ್ರಿ, ಒಂದು ಕರೆ, "ಲೋ, ಅವನಿಗೆ ಆಕ್ಸಿಡೆಂಟ್ ಆಗಿದೆ, ಸುಮಾರು ೫ ಘಂಟೆ ಹೊತ್ತಿಗೆ, ಅಲ್ಲೇ ಪಕ್ಕದಲ್ಲಿದ್ದ ಹಾಸ್ಪಿಟಲ್ ಗೆ ಯಾರೋ ಸೇರ್ಸಿದಾರೆ, ಪ್ಲೀಸ್ ಬರ್ತೀರಾ?". ರಾತ್ರಿಯ ಊಟ ಮಾಡ್ತಿದ್ದೆ ನಾನು, ಗಂಟಲಲ್ಲಿ ನಿಂತೊಯ್ತು, ಹಾಗು-ಹೀಗೂ ಮಾಡಿ, ನೀರು ಕುಡಿದು, ಬೇಗ ಊಟ ಮುಗಿಸಿ ಹಾಸ್ಪಿಟಲ್ ಹತ್ರ ಹೋಗೋ ಹೊತ್ತಿಗೆ, ಕೆಲವು ಗೆಳೆಯರು ಆಗ್ಲೇ ಬಂದಿದ್ರು.
ಹೇಗಾಯ್ತು, ಏನಾಯ್ತು, ಯಾವಾಗ ಹೀಗಾಯ್ತು, ಯಾರದು ತಪ್ಪು, ಎಲ್ಲಿ ಆಯ್ತು... ಪ್ರಶ್ನೆಗಳ ಸುರಿಮಳೆ... ಯಾವ್ದಕ್ಕೂ ಸಮರ್ಪಕ ಉತ್ತರ ಸಿಗ್ಲಿಲ್ಲ, ತಮಗೆ ಗೊತ್ತಿರೋದನ್ನ ಹೇಳ್ತಾ ಇದ್ರೂ. ಅವನ್ನ ನೋಡೋಕೆ ನಮ್ಮನ್ನ ಒಳಗೆ ಬಿಡ್ಲಿಲ್ಲ, ಇರೋ ವರ್ಗು ಇದ್ದು ಮತ್ತೆ ವಾಪಾಸ್ ಬಂದಿದ್ದಾಯ್ತು. ಒಂದು ವಾರದವರೆಗೆ ಅದು ಇದು ಕಾರಣ ಕೊಟ್ಟು, ತಳ್ಕೊಂಡು ಬಂದ್ರು ಆ ಆಸ್ಪತ್ರೆಯ ಡಾಕ್ಟರ್ ಗಳು. ಅದನ್ನೇ ನಂಬಬೇಕಾದ ಪರಿಸ್ಥಿತಿ ನಮ್ಮೆಲ್ಲರದ್ದು, ಹಾಗಾಗಿ ಅದನ್ನೇ ನಂಬಿಕೊಂಡು, ನಮ್ಮ ಗೆಳೆಯ ಹುಷಾರಗ್ತಾನೆ ಅಂತ ಆಶಾವಾದದೊಂದಿಗೆ ಒಂದು ವಾರ ಕಳೆದ್ವಿ, ಈ ಮಧ್ಯೆ ಮತ್ತೊಬ್ಬ ಗೆಳೆಯರು, ನಮ್ಮ ಗೆಳೆಯ ಬೇಗ ಹುಷಾರಾಗಿ ವಾಪಾಸ್ ಬರಲಿ ಅಂತ ಮೃತ್ಯಂಜಯ ಹೋಮ, ಪೂಜೆ ಪುನಸ್ಕಾರ ಎಲ್ಲ ಮಾಡಿಸಿದ್ರು. ಆದರೆ, ಆದರೆ, ಎಷ್ಟೇ ಅದ್ರು ನಾವು ಆಟಿಕೆಗಳು ಅಲ್ವೇ, ಹಾಗಾಗಿ ನಮ್ಮ ಪಾತ್ರ ಅಷ್ಟೇ, ಆಟದಲ್ಲಿ ಭಾಗಿಯಾಗೋದು. ಆಟದ ನಿಯಮ ಬದಲಾಯಿಸೋದಾಗ್ಲಿ, ಅದರ ವಿರುದ್ಧ ಆಟ ನಡೆಸೋದಾಗ್ಲಿ ನಮ್ಮಿಂದ ಸಾಧ್ಯವಿಲ್ಲದ ಕೆಲಸ. ಕೊನೆಗೂ ಆ ಘಳಿಗೆ ಬಂದೇಬಿಡ್ತು, ವರಮಹಾಲಕ್ಷ್ಮಿ ಹಬ್ಬದ ಮಾರನೆ ದಿನ, ನಮ್ಮನೆಯಲ್ಲಿ ಲಕ್ಷ್ಮಿ ಅಲಂಕಾರದ ಹೂವನ್ನು ಸರಿ ಮಾಡ್ಬೇಕಿದ್ರೆ, ಹೂಡಿದ್ದ ಕಲಶ ಉರುಳಿಬಿತ್ತು. ಮನಸಲ್ಲಿ ಏನೋ ಒಂದ್ತರ ತಳಮಳ, ಮತ್ತೊಂದು ಕಡೆ ಮೃತ್ಯಂಜಯ ಹೋಮ ಫಲ ಕೊಡುತ್ತೆ ಅನ್ನೋ ನಂಬಿಕೆ. ಅದು ಆಗಿ, ೧೫ ನಿಮಿಷ ಅಂತರದಲ್ಲಿ, ಗೆಳೆಯನಿಂದ ಕರೆ,
" ಲೋ, ಅವ್ನು ಉಳ್ಯೋದು ಕಷ್ಟ ಅಂತ ಹೇಳ್ತಿದ್ದಾರೆ ಡಾಕ್ಟರ್, ಎಲ್ಲರ್ಗೂ ಹಾಸ್ಪಿಟಲ್ ಹತ್ರ ಬರೋಕೆ ಹೇಳು, ಯಾರ್ಗೆ ವಿಷ್ಯ ಹೇಳ್ಬೇಕು, ಹೆಂಗೆ ಹೇಳ್ಬೇಕು, ನೋಡ್ಕೊಂಡು ಹೇಳು, ಆದಷ್ಟು ಬೇಗ ಬಾ, mortuary ಗೆ ತಗೊಂಡು ಹೋಗ್ತಾರಂತೆ". ಒಂದು ಕ್ಷಣ ಆಕಾಶ ತಲೆ ಮೇಲೆ ಬಿದ್ದಂಗಾಯ್ತು, ಬೇರೆ ಯೋಚನೆ ಇಲ್ಲ,
"ಅಮ್ಮ, ಹೀಗಾಯ್ತಂತೆ, ನಾನು ಹಾಸ್ಪಿಟಲ್ಗೆ ಹೋಗ್ತೀನಿ", ಹೇಳಿ ಹೊರಟೆ. ಇನ್ನೊಬ್ಬ ಗೆಳತಿಯ ಜೊತೆಗೂಡಿ, ಹೊರಟ್ವಿ, ಹೋಗ್ತಾ ದಾರೀಲಿ ಮತ್ತೆ ಕರೆ, "ಲೋ, ಬರ್ತಾ ಇದ್ದೀಯಾ? ಯಾರ್ಯಾರ್ಗೆ ಹೇಳ್ದೆ?"
"ಹು ಕಣೋ, ಬರ್ತಾ ಇದ್ದೀವಿ, ಮತ್ತೆ ಏನು ಕಥೆ"
"ಆಗ್ಲೇ ಹೋಗ್ಬಿಟ್ಟಿದಾನೆ, ಅದ್ಕೆ ಬೇಗ ಬಾ ಅಂತ ಹೇಳಿದ್ದು"
"ಟೌನ್ಹಾಲ್ ಹತ್ರ ಇದೀವಿ, ಇನ್ನೊಂದು ಹತ್ತು ನಿಮಿಷ"
ಕೆಲವು, ಗೆಳೆಯ ಗೆಳತಿಯರಿಗೆ ಕಾರಣಾಂತರಗಳಿಂದ ವಿಷಯ ತಿಳಿಸೋಹಾಗಿರ್ಲಿಲ್ಲ, ತಿಳಿಸ್ದೆ ಬೇರೆ ವಿಧಿ ಇಲ್ಲ. ಒಂದು ಟೈಮ್ ಅಗೋ ಹೊತ್ಗೆ, ನೋಡು ನೋಡುತ್ತಿದ್ದಂತೆ, ಎಲ್ಲರು ಬಂದೇಬಿಟ್ರು. ಯಾರ ಮುಖ ಯಾರು ನೋಡೋ ಹಾಗಿಲ್ಲ, ಯಾರ ಕಣ್ಣಲ್ಲಿ, ಏನೇನು ಭಾವನೆಗಳೋ, ಏನೇನು ವೇದನೆಗಳೋ, ಅವನ್ಗೆ ತಿಳಿಬೇಕು.

ಮುಂದೆ (ಹಾಸ್ಪಿಟಲ್ ಇಂದ ಹೊರ ತಂದಾಗಿನಿಂದ, ಅವನ ಊರಿನ ಕಡೆ ಅವನ್ನ ತಗೊಂಡು ಹೋಗೋವರ್ಗೂ) ಏನಾಯ್ತು ಅಂತ ಹೇಳೋಕೆ ನನ್ನಿಂದ ಖಂಡಿತ ಸಾಧ್ಯವಿಲ್ಲ... 

ನಾವೆಲ್ಲಾ ಒಂದೇ ಆಫೀಸಿನಲ್ಲಿ ಕೆಲ್ಸ ಮಾಡ್ತಿದ್ದರಿಂದ, ಆಫೀಸಿನ ಕೆಲವು ದೊಡ್ಡ ಹುದ್ದೆಯ ವ್ಯಕ್ತಿಗಳು ಕೂಡ ಬಂದಿದ್ರು ನೋಡೋಕೆ. ಅಲ್ಲಿದ್ದ ಪರಿಸ್ಥಿತಿ ನೋಡಿ ನಾವು ಕೂಡ ಅವನ ಊರಿಗೆ ಹೋಗೋಣ ಅಂತ ನಿರ್ಧಾರ ಮಾಡಿದ್ವಿ, ಅದಕ್ಕೆ ದೊಡ್ಡ ಹುದ್ದೆಯ ವ್ಯಕ್ತಿಗಳು ತುಂಬಾ ಸಹಕರಿಸಿದರು, ಅವರ ಸಹಕಾರ ಜ್ನಾಪಿಸ್ಕೋಳೋದು ಇಲ್ಲಿ ಅವಶ್ಯಕ. ಉಟ್ಟ ಬಟ್ಟೆಯಲ್ಲೇ, ನಾವು ಮೂರು ಜನ ಗೆಳೆಯರು, ಸ್ವಲ್ಪ ತಿನ್ಕೊಂಡು, ಅವನ ಊರಿಗೆ ಹೊರಟು ನಿಂತ್ವಿ. ಸಂಜೆ ಸುಮಾರು ೬-೭ ಘಂಟೆಯ ಅಂತರದಲ್ಲಿ ಶುರು ಆದ ನಮ್ಮ ಪ್ರಯಾಣ, ಬೆಳಗಿನ ಜಾವ ಅವನ ಊರು ಸೇರ್ಕೊಂತು. ಅವರು ಬರುವ ಸಮಯಕ್ಕಾಗಿ ಕಾದಿದ್ದ ನಾವು, ಸ್ವಲ್ಪ ನಿದ್ದೆಯಲ್ಲಿದ್ವಿ, ಕರೆ ಬಂದ ತಕ್ಷಣ ಅವನ ಮನೆ ಕಡೆ ಪ್ರಯಾಣ. ಅವನ ಮನೆಯಲ್ಲಿ ಹೇಳಳಸಾಧ್ಯವಾದ ರೋಧನ, ನಮ್ಮಿಂದ ನೋಡೋಕೆ ಆಗ್ತಾ ಇರ್ಲಿಲ್ಲ, ಆದರೆ ಬೇರೆ ದಾರಿ ಇಲ್ಲ, ಅಲ್ಲಿನ ಜನರನ್ನ ಹೇಗಾದ್ರು ಮಾಡಿ ನಿಯಂತ್ರಿಸಬೇಕಿತ್ತು. ಕೈಲಾದ ಮಟ್ಟಿಗೆ ನಮ್ಮಿಂದ ಪ್ರಯತ್ನ.. ಕೊನೆಗೆ ಆ ಸಮಯ ಬಂದೇ ಬಿಡ್ತು, ಅವನಿದ್ದ ಗಾಡಿ ಬರ್ತಿದ್ದಂಗೆ, ಮನೆಯಲ್ಲಿ ಅಳು, ನೋವು, ವೇದನೆ, ಆಕ್ರಂದನ... ಆಕಾಶ ಮುಟ್ಟಿತ್ತು.

ಆ ನೋವಿನ ವರ್ಣನೆ ನನ್ನಿಂದ ಅಸಾಧ್ಯ, ಕ್ಷಮೆ ಇರಲಿ.

ಸಣ್ಣ ಹಳ್ಳಿ ಅದ್ದರಿಂದ, ಇಡೀ ಊರಿನ ಜನ ಅಲ್ಲಿ ಇದ್ರು. ಅದು ಇದು ಸಂಪ್ರದಾಯ,ಪೂಜೆ ಎಲ್ಲ ಅದ್ಮೇಲೆ, ಅವನ್ನ ಎತ್ಕೊಂಡು ಹೋಗ್ಬೇಕು... ಜೀವನದ ಹಾದಿಯಲಿ ಪಯಣಿಸಿದ ನಮ್ಮ ಗೆಳೆಯನ ಕೊನೆಯ ಪ್ರಯಾಣ... ಅವನ ಹೊತ್ತು ಹೋಗುತ್ತಿದ್ದ ನಾವು ಒಂದು ಕ್ಷಣ ಹಿಂದೆ ತಿರುಗಿ ನೋಡಿದ್ರೆ, ಜನರ ಗುಂಪು, ಮತ್ತೇನು ಕಾಣ್ತಾ ಇಲ್ಲ, ನೋವಿನ ಭಾವ. ಆ ಜಾಗ ಸೇರ್ತಿದ್ದಂಗೆ, ತಲೆಗೆ ಏನು ತೋಚ್ತಾ ಇಲ್ಲ, ಏನಾಗ್ತಿದೆ ಅಂತ ತಿಳಿತಾ ಇಲ್ಲ, ನಾವು ಇಲ್ಲಿ ಯಾಕಿದ್ದೀವಿ ಗೊತಾಗ್ತಾ ಇಲ್ಲ, ಎಲ್ಲ ಖಾಲಿ ಖಾಲಿ, ನಮ್ಮ ಕಣ್ಣು ಮುಂದೆ ಏನಾಗ್ತಿದೆ ಅಂತ ನಮಗೆ ಗೊತ್ತಾಗೋ ಹೊತ್ತಿಗೆ, ಅವನು ಮಣ್ಣೊಳಗೆ ಹೋಗ್ಬಿಟ್ಟಿದ್ದ, ಯಾವುದೊ ಅಪರಿಚಿತ ಲೋಕದಲ್ಲಿದ್ದಂಗೆ, ಏನು ಗೊತ್ತಾಗ್ದೆ, ಕೈಯಲ್ಲಿ ಹಿಡಿದ ಮಣ್ಣು ಹಾಗೆ ಕೆಳಗೆ ಬಿದ್ದಿತ್ತು...
ಗೆಳೆಯನ ಅಂತ್ಯಕ್ರಿಯೆ................................................. :(

ಮತ್ತೊಂದು ವಿಷಾದ.... ಕೆಳಗಿನ ಕೊಂಡಿಯಲ್ಲಿ...
http://gundachandru.blogspot.in/2012/08/2.html

No comments:

Post a Comment